ಪೆಗಾಸಸ್ ಸ್ಪೈವೇರ್ ಹಗರಣ: ಸ್ವತಂತ್ರ ತನಿಖೆಗೆ ಆಗ್ರಹಿಸಿ ಸುಪ್ರೀಂ ಮೆಟ್ಟಲೇರಿದ ಹಿರಿಯ ಪತ್ರಕರ್ತರು

Update: 2021-07-27 15:54 GMT

ಹೊಸದಿಲ್ಲಿ,ಜು.27: ಇಸ್ರೇಲ್ನ ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಗಣ್ಯನಾಗರಿಕರು,ರಾಜಕಾರಣಿಗಳು ಹಾಗೂ ಪತ್ರಕರ್ತರ ಮೇಲೆ ಸರಕಾರಿ ಏಜೆನ್ಸಿಗಳು ಬೇಹುಗಾರಿಕೆ ನಡೆಸುತ್ತಿವೆಯೆಂಬ ಆರೋಪಗಳ ಬಗ್ಗೆ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹಿರಿಯ ಪತ್ರಕರ್ತರಾದ ಎನ್.ರಾಮ್ ಹಾಗೂ ಶಶಿಕುಮಾರ್ ಸುಪ್ರೀಂಕೋರ್ಟ್ನ ಮೆಟ್ಟಲೇರಿದ್ದಾರೆ.

 ಈ ಅರ್ಜಿಯ ವಿಚಾರಣೆ ಮುಂದಿನ ಕೆಲವೇ ದಿನಗಳಲ್ಲಿ ಆಲಿಕೆಗೆ ಬರುವ ಸಾಧ್ಯತೆಯಿದೆ. ಪೆಗಾಸಸ್ ಸ್ಪೈವೇರ್ ಮೂಲಕ ಫೋನ್ ಗಳ ಅಕ್ರಮ ಕದ್ದಾಲಿಕೆ ನಡೆಸುವ ಸರಕಾರಿ ಏಜೆನ್ಸಿಗಳ ಪ್ರಯತ್ನವು ವಾಕ್ಸ್ವಾತಂತ್ರ ಹಾಗೂ ಭಿನ್ನಮತ ವ್ಯಕ್ತಪಡಿಸುವ ಸ್ವಾತಂತ್ರವನ್ನು ಹೊಸಕಿ ಹಾಕುವ ಪ್ರಯತ್ನವಾಗಿದ್ದು ಈ ಬಗ್ಗೆ ತನಿಖೆಯಾಗಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಯಾವುದೇ ರೀತಿಯ ಕಣ್ಗಾವಲು ಚಟುವಟಿಕೆಗಳನ್ನು ನಡೆಸಲು ಪೆಗಾಸಸ್ ಸ್ಪೈವೇರ್ನ ಪರವಾನಿಗೆಯನ್ನು ಸರಕಾರ ಅಥವಾ ಅದರ ಯಾವುದೇ ಏಜೆನ್ಸಿಳು ಪಡೆದು ಕೊಂಡಿವೆಯೇ ಹಾಗೂ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಬಳಸಿಕೊಳ್ಳಲಾಗಿದೆಯೇ ಎಂಬುದನ್ನು ಬಹಿರಂಗಪಡಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
 
ಜಗತ್ತಿನಾದ್ಯಂತ ಹಲವಾರು ಪ್ರಮುಖ ಮಾಧ್ಯಮ ಸಂಸ್ಥೆಗಳು ಪಾಲ್ಗೊಂಡು ನಡೆಸಲಾದ ತನಿಖೆಯಲ್ಲಿ ಪೆಗಾಸಸ್ ಸ್ಪೈವೇರ್ ಬಳಸಿ ಭಾರತದಲ್ಲಿ ಹಲವಾರು ಪತ್ರಕರ್ತರು, ನ್ಯಾಯವಾದಿಗಳು, ಸಚಿವರು, ಪ್ರತಿಪಕ್ಷ ನಾಯಕರು, ಸಾಂವಿಧಾನಿಕ ಪದಾಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 142ಕ್ಕೂ ಅಧಿಕ ಮಂದಿಯನ್ನು ಗುರಿಯಿರಿಸಿ ಬೇಹುಗಾರಿಕೆಗೆ ನಡೆಸಲಾಗಿದೆಎಂದು ಅರ್ಜಿದಾರರು ಆಪಾದಿಸಿದ್ದಾರೆ.
  
ನಾಗರಿಕರ ಮೇಲೆ ಮಿಲಿಟರಿ ದರ್ಜೆಯ ಸ್ಪೈವೇರ್ ಬಳಕೆಯು ಸಂವಿಧಾನದ 14 (ಕಾನೂನಿನ ಎದುರು ಸರ್ವರೂ ಸಮಾನ), 19 (ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ) ಹಾಗೂ 21 (ಜೀವನ ಹಾಗೂ ವೈಯಕ್ತಿಕ ಸ್ವಾತಂತ್ರದ ರಕ್ಷಣೆ) ಕಲಮುಗಳ ಅಡಿ ಮೂಲಭೂತಹಕ್ಕೆಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿರುವ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆಎಂದು ಅರ್ಜಿಯಲ್ಲಿ ಗಮನಸೆಳೆಯಲಾಗಿದೆ.
 
ಪೆಗಾಸಸ್ ಸ್ಪೈವೇರ್ ಮೂಲಕ ಮಾಡಲಾದ ಹ್ಯಾಕಿಂಗ್ ಕ್ರಿಮಿನಲ್ ಸ್ವರೂಪದ ಅಪರಾಧವಾಗಿದ್ದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ಗಳಾದ 66 ( ಕಂಪ್ಯೂಟರ್ ಸಂಬಂಧಿ ಅಪರಾಧ), 66ಬಿ ( ಅಪ್ರಮಾಣಿಕವಾಗಿ ಕಂಪ್ಯೂಟರ್ ಅಥವಾ ಸಂವಹನ ಸಾಧನಗಳಲ್ಲಿನ ಮಾಹಿತಿಗಳನ್ನು ಪಡೆದುಕೊಳ್ಳುವುದು), 66ಇ (ಖಾಸಗಿತನದ ಉಲ್ಲಂಘನೆಗಾಗಿ ದಂಡನೆ) ಹಾಗೂ 66 ಎಫ್ (ಸೈಬರ್ ಭಯೋತ್ಪಾದನೆಗೆ ಶಿಕ್ಷೆ) ಅಡಿ ಜೈಲುಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾದ ಅಪರಾಧವೆಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News