ಫ್ರಾನ್ಸ್: ಕ್ಯೂಬಾ ದೂತಾವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿ

Update: 2021-07-27 16:37 GMT

ಪ್ಯಾರಿಸ್, ಜು.27: ಪ್ಯಾರಿಸ್ ನಲ್ಲಿರುವ ತನ್ನ ರಾಯಭಾರಿ ಕಚೇರಿಯ ಮೇಲೆ ಸೋಮವಾರ ರಾತ್ರಿ ಪೆಟ್ರೋಲ್ ಬಾಂಬ್ ಎಸೆಯಲಾಗಿದ್ದು ಕಚೇರಿಗೆ ತೀವ್ರ ಹಾನಿಯಾಗಿದೆ. ಆದರೆ ರಾಜತಾಂತ್ರಿಕ ಸಿಬಂದಿಗಳಿಗೆ ಅಪಾಯವಾಗಿಲ್ಲ ಎಂದು ಕ್ಯೂಬಾ ಸರಕಾರ ಹೇಳಿದೆ.

 ಈ ದಾಳಿಯನ್ನು ಕ್ಯೂಬಾ ರಾಯಭಾರಿ ಕಚೇರಿ ಮಂಗಳವಾರ ಖಂಡಿಸಿದೆ. ಮೊಲೊಟೊವ್ ಕಾಕ್ಟೇಲ್ಗಳನ್ನು ಸೋಮವಾರ ತಡರಾತ್ರಿ ಎಸೆಯಲಾಗಿದ್ದು ಇದರಲ್ಲಿ 2 ರಾಯಭಾರಿ ಕಚೇರಿಯ ಆವರಣದೊಳಗೆ ಬಿದ್ದು ಸ್ಫೋಟಿಸಿದ್ದರಿಂದ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಕಚೇರಿಯ ಸಿಬಂದಿವರ್ಗದವರು ಬೆಂಕಿಯನ್ನು ನಿಯಂತ್ರಿಸಿದೆ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಫ್ರಾನ್ಸ್ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಈ ಕೃತ್ಯದ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಕ್ಯೂಬಾದ ವಿದೇಶ ವ್ಯವಹಾರ ಸಚಿವ ಬ್ರೂನೋ ರಾಡ್ರಿಗಸ್ ಆರೋಪಿಸಿದ್ದಾರೆ. ನಮ್ಮ ದೇಶದ ವಿರುದ್ಧ ಅಮೆರಿಕ ನಡೆಸುತ್ತಿರುವ ನಿರಂತರ ಅಪಪ್ರಚಾರವು ಈ ರೀತಿಯ ಚಟುವಟಿಕೆ ಹಾಗೂ ಹಿಂಸಾಚಾರಕ್ಕೆ ಪ್ರೇರಣೆ ನೀಡುತ್ತಿದೆ ಎಂದವರು ಟ್ವೀಟ್ ಮಾಡಿದ್ದಾರೆ. 

ಕ್ಯೂಬಾದಲ್ಲಿ ಜುಲೈ 11 ಮತ್ತು 12ರಂದು ನಡೆದಿದ್ದ ಪ್ರತಿಭಟನೆಯನ್ನು ನಿಯಂತ್ರಿಸಲು ಅಲ್ಲಿನ ಸರಕಾರ ಕೈಗೊಂಡ ಕ್ರಮಗಳ ಪರ ಮತ್ತು ವಿರೋಧವಾಗಿ ಕಳೆದ ಕೆಲ ವಾರಗಳಿಂದ ವಿಶ್ವದಾದ್ಯಂತ ಹಲವೆಡೆ ಕ್ಯೂಬಾದ ರಾಯಭಾರಿ ಕಚೇರಿಯ ಎದುರು ಪ್ರತಿಭಟನೆ, ರ್ಯಾಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News