ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆ: ಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ...

Update: 2021-07-27 19:18 GMT

ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪಕ್ಷದ ಎಲ್ಲ ನಾಯಕರ ಬೆಂಬಲದೊಂದಿಗೆ, ಲಕ್ಷಾಂತರ ಕಾರ್ಯಕರ್ತರ ಆಶೀರ್ವಾದದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿರುವ ಬೊಮ್ಮಾಯಿ ಅವರ ಸಮರ್ಥ, ಯಶಸ್ವಿ ಕಾರ್ಯನಿರ್ವಹಣೆಗೆ ಹಾರೈಸುತ್ತೇನೆ.

ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಆದ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಅಭಿನಂದನೆಗಳು. ಸಿಕ್ಕ ಈ ಅವಕಾಶದಲ್ಲಿ ನಾಡಿನ ಜನತೆಗೆ ಉತ್ತಮ ಆಡಳಿತ ನೀಡುವಿರೆಂದು ಆಶಿಸುತ್ತೇನೆ.

ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ

ರಾಜ್ಯದ ಆಡಳಿತ ಭ್ರಷ್ಟಾಚಾರದಿಂದ ಹೊಲಸೆದ್ದಿರುವ, ದುರಾಡಾಳಿತದಿಂದ ದಿಕ್ಕುತಪ್ಪಿರುವ ಮತ್ತು ಆಂತರಿಕ ಕಚ್ಚಾಟದಿಂದ ನಲುಗಿಹೋಗಿರುವ ಸಂದರ್ಭದಲ್ಲಿ ಸ್ನೇಹಿತ ಬಸವರಾಜ ಬೊಮ್ಮಾಯಿ ಹೊಸಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ಯಶಸ್ಸನ್ನು ಕೋರುತ್ತೇನೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಸಹಕಾರದ ಭರವಸೆ ನೀಡುತ್ತೇನೆ.

ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಹಿರಿಯ ಅನುಭವಿ, ಮುತ್ಸದ್ಧಿ ರಾಜಕಾರಣಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಗಿದೆ.

ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಆಡಳಿತದ ಮೇಲೆ ಮರಳಿ ಗಮನ ಹರಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಭರವಸೆ ಇರಿಸಿದೆ.

ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯಗಳು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯಕ್ಕೆ ಪರಿಹಾರಾತ್ಮಕವಾಗಿ ಕೆಲಸ ಮಾಡುವಿರೆಂದು ನಿರೀಕ್ಷಿಸುವೆ. ನೀರಾವರಿ ವಿಚಾರಗಳಲ್ಲಿ ತಮಗೆ ಜ್ಞಾನವುಂಟು. ಅಣೆಕಟ್ಟು ನಿರ್ಮಾಣದಂಥ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳತ್ತ ತಾವು ಗಮನಹರಿಸುವಿರೆಂದು ಭಾವಿಸುವೆ.

ಎಚ್.ಡಿ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭ ಕೋರುತ್ತೇನೆ. ನಾಡಿನ ಸಮಸ್ತ ಜನರ ಆಶೋತ್ತರಗಳನ್ನು ಸಾಕಾರಗೊಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ.

ಡಾ.ಕೆ.ಸುಧಾಕರ್, ಮಾಜಿ ಸಚಿವ

ಪಕ್ಷದ ಹೈಕಮಾಂಡ್ ಉತ್ತಮ ತೀರ್ಮಾನ ಕೈಗೊಂಡಿದೆ. ಹಿರಿಯ, ಅನುಭವಿ ರಾಜಕಾರಣಿಗೆ ಮಣೆ ಹಾಕಲಾಗಿದೆ. ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಅವರ ಜ್ಞಾನ ಹಾಗೂ ಅನುಭವ ಪಕ್ಷ ಹಾಗೂ ಸರಕಾರಕ್ಕೆ ಸಹಕಾರಿಯಾಗಲಿದೆ. ಅವರೊಬ್ಬ ಒಳ್ಳೆಯ ಆಡಳಿತಗಾರ, ಎಲ್ಲರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದಾರೆ. ವೈಯಕ್ತಿಕವಾಗಿ ನನಗೂ ಅವರು ಮಾರ್ಗದರ್ಶಕರಾಗಿದ್ದಾರೆ.

ಅರವಿಂದ ಬೆಲ್ಲದ್, ಬಿಜೆಪಿ ಶಾಸಕ

ಬಸವರಾಜ ಬೊಮ್ಮಾಯಿ ಬಿಜೆಪಿಯ ಅನುಭವಿ ಮುಖಂಡರಾಗಿರುವುದಲ್ಲದೆ, ಈಗಾಗಲೇ ಮಂತ್ರಿಮಂಡಲದಲ್ಲಿ ಹಲವು ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಸಚಿವರಾಗಿ ಹೆಸರು ಮಾಡಿದ್ದಾರೆ.  ತಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರ ಮಾರ್ಗದರ್ಶನವೂ  ಬೊಮ್ಮಾಯಿ ಅವರಿಗೆ ವರದಾನವಾಗಿ ಲಭಿಸಿತ್ತು.  ಈ ಎಲ್ಲ ಅನುಭವಗಳ ಹಿನ್ನೆಲೆಯಲ್ಲಿ ಮೋದಿಜಿ ಅವರ ಆಶಯದಂತೆ ಕರ್ನಾಟಕವನ್ನು ಒಂದು ಮಾದರಿ ರಾಜ್ಯವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ  ನನಗಿದೆ ಎಂದು ಅವರು ಹೇಳಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ವರಿಷ್ಠರು ಅತ್ಯುತ್ತಮ ನಾಯಕರನ್ನೇ ಆಯ್ಕೆ ಮಾಡಿದೆ. ಸಂಸದೀಯ ಕಲಾಪದಲ್ಲಿ ದಶಕಗಳ ಕಾಲದ ಅಪಾರ ಅನುಭವ ಹೊಂದಿರುವ ಅವರು, ಈಗಾಗಲೇ ಹಲವಾರು ಪ್ರಮುಖ ಜಬಾವ್ದಾರಿಗಳನ್ನು ನಿಭಾಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.‌ಆರ್.‌ಬೊಮ್ಮಾಯಿ ಅವರ ಪುತ್ರರೂ ಆಗಿರುವ ಅವರು, ತಮ್ಮ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಾರೆಂಬ ನಂಬಿಕೆ ನನಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಮೇಲ್ಮನೆ ಸದಸ್ಯರಾಗಿ, ಶಾಸಕರಾಗಿ ಹಾಗೂ ಸಹಕಾರ, ಜಲ ಸಂಪನ್ಮೂಲ, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಗೃಹ ಸಚಿವರಾಗಿ ಅತ್ಯುತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದರು. ಈಗ ಅವರಿಗೆ ಅವರಿಗೆ ಪಕ್ಷದಲ್ಲಿ ಅತ್ಯುನ್ನತ ಗೌರವ ಸಿಕ್ಕಿದೆ. ಅವರ ಆಯ್ಕೆಯನ್ನು ನಾವೆಲ್ಲರೂ ಮನಸಾರೆ ಸ್ವಾಗತಿಸುತ್ತೇವೆ ಹಾಗೂ ಅವರ ನಾಯಕತ್ವದಲ್ಲಿ ಕೆಲಸ ಮಾಡುತ್ತೇವೆ. 

ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News