ಬೊಮ್ಮಾಯಿ ಅಭಿನಂದಿಸಿ ಬಿಎಸ್‌ವೈ ಶ್ಲಾಘಿಸಿದ ಪ್ರಧಾನಿ

Update: 2021-07-28 16:16 GMT

ಹೊಸದಿಲ್ಲಿ, ಜು.28: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿಯನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜೀನಾಮೆ ನೀಡಿದ ಬಿಎಸ್ ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ. ಪಕ್ಷಕ್ಕೆ ಯಡಿಯೂರಪ್ಪ ಚಿರಸ್ಮರಣೀಯ ಕೊಡುಗೆ ಸಲ್ಲಿಸಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ನಮ್ಮ ಪಕ್ಷದ ಮತ್ತು ಕರ್ನಾಟಕದ ಪ್ರಗತಿಗೆ ಯಡಿಯೂರಪ್ಪ ನೀಡಿದ ಮಹಾನ್ ಕೊಡುಗೆಯನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಹಲವು ದಶಕಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ, ಜನರೊಂದಿಗೆ ಬೆರೆತು ಕಠಿಣ ಪರಿಶ್ರಮದಿಂದ ದುಡಿದಿದ್ದಾರೆ. ಸಾಮಾಜಿಕ ಸುಧಾರಣೆಗೆ ಅವರು ತೋರಿದ್ದ ಬದ್ಧತೆ ಶ್ಲಾಘನೀಯ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ನಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಯವರನ್ನೂ ಅಭಿನಂದಿಸಿದ್ದಾರೆ. ರಾಜಕೀಯದಲ್ಲಿ ಹಾಗೂ ಆಡಳಿತದಲ್ಲಿ ಉತ್ತಮ ಅನುಭವ ಹೊಂದಿರುವ ಬೊಮ್ಮಾಯಿ, ಕರ್ನಾಟಕದಲ್ಲಿ ನಮ್ಮ ಸರಕಾರ ಮಾಡಿರುವ ಅಸಾಧಾರಣ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಯಡಿಯೂಪ್ಪರನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದಲ್ಲಿ ಬಿಜೆಪಿಯನ್ನು ತಳಮಟ್ಟದಲ್ಲಿ ಬಲಿಷ್ಟಗೊಳಿಸುವಲ್ಲಿ ಯಡಿಯೂರಪ್ಪ ಅವರ ಕಠಿಣ ಪರಿಶ್ರಮದ ಕೊಡುಗೆಯಿದೆ. ಅವರು ಪಕ್ಷ ಹಾಗೂ ಸರಕಾರಕ್ಕೆ ಮಾರ್ಗದರ್ಶನ ಮುಂದುವರಿಸುವ ವಿಶ್ವಾಶವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಹಾಗೂ ಶಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ನೀವು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧನ್ಯವಾದ ಎಂದು ಮರುಟ್ವೀಟ್ ಮಾಡಿದ್ದಾರೆ. ಮೂಲಗಳ ಪ್ರಕಾರ, ಯಡಿಯೂರಪ್ಪ ಜುಲೈ 10ರಂದೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು ರಾಜೀನಾಮೆ ಪತ್ರವನ್ನು ಪ್ರಧಾನಿ ಮೋದಿಗೆ ರವಾನಿಸಲಾಗಿತ್ತು. ಆದರೆ ಈ ಬಗ್ಗೆ ಯಡಿಯೂರಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News