ಸಂಪಾಜೆ ರಸ್ತೆಯಲ್ಲಿ ಬಿರುಕು: ಭಾರೀ ವಾಹನಗಳ ಸಂಚಾರ ನಿಷೇಧ

Update: 2021-07-28 08:16 GMT

ಮಡಿಕೇರಿ : ಕೊಡಗು ಜಿಲ್ಲೆಯ ಮೂಲಕ ಹಾದು ಹೋಗಿರುವ ಮೈಸೂರು-ಮಡಿಕೇರಿ-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275 ಅಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಪರಿಣಾಮ ಸಂಪಾಜೆ ಚೆಕ್‍ಪೋಸ್ಟ್‍ನಲ್ಲಿ ಭಾರೀ ತೂಕದ ಸರಕು ಹೊತ್ತ ಲಾರಿಗಳು ಸಾಲುಗಟ್ಟಿ ನಿಂತಿವೆ. 

ಕೊಡಗು ಜಿಲ್ಲಾಡಳಿತ ಮಳೆಗಾಲ ರಸ್ತೆ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 16 ಟನ್ ಮೇಲ್ಪಟ್ಟ ಸರಕು ಸಾಗಾಣಿಕೆ ವಾಹನಗಳನ್ನು ನಿಷೇಧಿಸಿ ಒಂದು ತಿಂಗಳ ಮೊದಲೇ ಆದೇಶ ಹೊರಡಿಸಿತ್ತು. ಈ ಆದೇಶದಂತೆ ಪ್ರಯಾಣಿಕರ ಸಾಗಾಟ ವಾಹನಗಳು, ಪೆಟ್ರೋಲಿಯಂ ಉತ್ಪನ್ನ, ತುರ್ತು ಸೇವೆ ನೀಡುವ ವಾಹನಗಳಿಗೆ ನಿರ್ಬಂಧದಲ್ಲಿ ಸಡಿಲಿಕೆ ನೀಡಲಾಗಿತ್ತು.

ಈ ನಡುವೆ ಅತಿಯಾಗಿ ಸುರಿದ ಮಳೆಯಿಂದ ಮಡಿಕೇರಿ ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಹಲವಾರು ಕಡೆಗಳಲ್ಲಿ ಭೂ ಕುಸಿತ ಮತ್ತು ರಸ್ತೆ ಬಿರುಕು ಬಿಟ್ಟ ಪರಿಣಾಮ ಹೆದ್ದಾರಿಗೆ ಹಾನಿಯಾಗುವ ಸಾಧ್ಯತೆಯೂ ಕಂಡು ಬಂದಿತ್ತು. 

ಇದೇ ವೇಳೆ ಚಾರ್ಮುಡಿ ಘಾಟ್ ರಸ್ತೆಯಲ್ಲಿ ಭಾರೀ ಭೂ ಕುಸಿತವಾಗಿ ಅಲ್ಲಿನ ಹೆದ್ದಾರಿಗೆ ಭಾರಿ ಹಾನಿಯಾಗಿತ್ತು. ಪರಿಣಾಮ ಆ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಕಾರಣದಿಂದ ಬಂಟ್ವಾಳ-ಸಂಪಾಜೆ-ಮಡಿಕೇರಿ-ಕುಶಾಲನಗರ ಮಾರ್ಗವಾಗಿ 2-3ದಿನ ಭಾರಿ ಸರಕು ಹೊತ್ತ ಲಾರಿಗಳು ಸಂಚರಿಸಿದ್ದವು. ಜಿಲ್ಲಾಡಳಿತದ ಆದೇಶವನ್ನೂ ಮೀರಿ, ಲಾರಿಗಳು ಸಂಚರಿಸಿರುವುದಕ್ಕೆ ಶಾಸಕ ಕೆ.ಜಿ. ಬೋಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೇ ಯಾವುದೇ ಕಾರಣ್ಕಕೂ ಕೊಡಗಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಭಾರದ ಸರಕು ತುಂಬಿದ ಲಾರಿಗಳು ಸಂಚರಿಸುವುದನ್ನು ತಡೆಯುವಂತೆ ಸರಕಾರದೊಂದಿಗೆ ವ್ಯವಹರಿಸಿದ್ದರು. 

ಕೊಡಗು ಹೈವೆ ಬಂದ್ ಮಾಡಲಾಗಿರುವ ಬಗ್ಗೆ ಯಾವುದೇ ಮಾಹಿತಿ ಅರಿಯದ ಲಾರಿಗಳು ಸಂಪಾಜೆ ಚೆಕ್ ಪೋಸ್ಟ್ ಮೂಲಕ ಮಡಿಕೇರಿ ಮಾರ್ಗವಾಗಿ ಮೈಸೂರು, ಬೆಂಗಳೂರು ಕಡೆಗೆ ತೆರಳಲು ಚೆಕ್‍ಪೋಸ್ಟ್ ಕಡೆ ಆಗಮಿಸಿವೆ. ಚೆಕ್ ಪೋಸ್ಟ್‍ನಲ್ಲಿರುವ ಪೊಲೀಸ್ ಸಿಬ್ಬಂದಿಗಳು ಜಿಲ್ಲಾಡಳಿತದ ಆದೇಶದಂತೆ ಎಲ್ಲಾ ಲಾರಿಗಳನ್ನು ತಡೆದು ನಿಲ್ಲಿಸಿ ಬೇರೆ ಮಾರ್ಗಗಳ ಮೂಲಕ ತೆರಳುವಂತೆ ತಿಳಿ ಹೇಳಿದ್ದರು. ಆದರೆ ಈಗಾಗಲೆ ಅರ್ಧ ದಾರಿಗೆ ಬಂದಿರುವ ಲಾರಿಗಳನ್ನು ಮರಳಿ ಹಿಂದಕ್ಕೆ ಕೊಂಡೊಯ್ಯಲು ಒಪ್ಪದ ಲಾರಿ ಚಾಲಕರು ಒಮ್ಮೆ ಹೆದ್ದಾರಿ ಮೂಲಕ ಸಾಗಲು ಅವಕಾಶ ನೀಡುವಂತೆ ಪೊಲೀಸರ ಬಳಿ ಅಂಗಲಾಚುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಂಪಾಜೆ ಚೆಕ್‍ಪೋಸ್ಟ್‍ನಲ್ಲಿ 50ಕ್ಕೂ ಹೆಚ್ಚು ಮಲ್ಟಿ ಆ್ಯಕ್ಸಿಲ್, ಲಾಂಗ್ ಚಾಸೀಸ್ ಲಾರಿಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಲಾರಿಗಳಲ್ಲೇ ಅಡುಗೆ ತಯಾರಿಸಿ ದಿನ ಕಳೆಯುತ್ತಿರುವ ಲಾರಿ ಚಾಲಕರು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. 

ಹೆದ್ದಾರಿಗೆ ಆತಂಕ

ಜಿಲ್ಲೆಯಲ್ಲಿ ಇದೀಗ ಮಳೆ ಬಿಡುವು ನೀಡಿದ್ದು, ಹೆದ್ದಾರಿಗೆ ಹಾನಿಯಾಗಿರುವ ಸ್ಥಳಗಳಲ್ಲಿ ತಾತ್ಕಾಲಿಕ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಚೆಕ್ ಪೋಸ್ಟ್‍ಗಳಲ್ಲಿ ನಿಂತಿರುವ 14 ಚಕ್ರದ 16 ಟನ್ ಮೇಲ್ಪಟ್ಟು ಸರಕು ತುಂಬಿದ ಲಾರಿಗಳನ್ನು ಸಂಚರಿಸಲು ಅನುವು ಮಾಡಿಕೊಟ್ಟರೆ ಮತ್ತೆ ಹೆದ್ದಾರಿ ಕುಸಿಯುವ ಆತಂಕ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರನ್ನು ಕಾಡುತ್ತಿದೆ. 

ಇದೇ ರಾಷ್ಟ್ರೀಯ ಹೆದ್ದಾರಿಯ ಮೂಲಕ ವಿವಿಧ ಆಸ್ಪತ್ರೆಗಳಿಗೆ ಆಕ್ಸಿಜನ್ ಸಾಗಿಸುತ್ತಿದ್ದ ಮಲ್ಟಿಆ್ಯಕ್ಸಿಲ್ ಆಕ್ಸಿಜನ್ ಟ್ಯಾಂಕರ್ ಕೂಡ ಆಗಮಿಸಿದೆ. ತಕ್ಷಣ ಕಾರ್ಯೋನ್ಮುಖರಾದ ಚೆಕ್ ಪೋಸ್ಟ್ ಪೊಲೀಸರು ತುರ್ತು ಸೇವೆ ನಿಯಮದಂತೆ ಆಕ್ಸಿಜನ್ ಹೊತ್ತ ಲಾರಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನುಳಿದ ಯಾವುದೇ ಲಾರಿಗಳಿಗೆ ಸಂಚರಿಸಲು ನಿರ್ಬಂಧ ಮುಂದುವರೆದಿದೆ. ಫೋಟೋ :: ಲಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News