ಮಡಿಕೇರಿ: ಗುಂಪು ಹಲ್ಲೆಗೂ ನಮಗೂ ಸಂಬಂಧವಿಲ್ಲ; ಇಸಾಕ್ ಖಾನ್ ಸ್ಪಷ್ಟೀಕರಣ

Update: 2021-07-28 11:08 GMT

ಮಡಿಕೇರಿ ಜು.28 : ಬೋಯಿಕೇರಿ ಸಮೀಪ ಸಂಭವಿಸಿದ ಅಪಘಾತದ ಸಂದರ್ಭ ನಡೆದ ಗುಂಪು ಹಲ್ಲೆಗೂ ನಮಗೂ ಸಂಬಂಧವಿಲ್ಲವೆಂದು ಸ್ಪಷ್ಟ ಪಡಿಸಿರುವ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ರಾಜಕೀಯ ಒತ್ತಡದಿಂದ ಪೊಲೀಸರು ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಪಘಾತಗಳು ನಡೆಯುವುದು ಆಕಸ್ಮಿಕ, ಆದರೆ ಇದನ್ನೇ ನೆಪ ಮಾಡಿಕೊಂಡು ಘಟನೆಗೆ ಇಲ್ಲಸಲ್ಲದ ಬಣ್ಣ ಬಳಿಯುತ್ತಿರುವುದು ಸರಿಯಲ್ಲವೆಂದು ತಿಳಿಸಿದರು.

ನಮಗೂ ಹೆಂಡತಿ, ಮಕ್ಕಳು, ತಾಯಿ, ತಂದೆ ಇದ್ದಾರೆ, ಚಿನ್ನಾಭರಣ ಕಸಿದು ಹಲ್ಲೆ ಮಾಡುವಷ್ಟು ನೀಚರು ನಾವಲ್ಲ. ನಮ್ಮ ಮೇಲೆ ದರೋಡೆ ಪ್ರಕರಣ ದಾಖಲಿಸಿರುವುದು ಅತ್ಯಂತ ದು:ಖಕರ ವಿಚಾರವಾಗಿದೆ. ಅಪಘಾತ ಒಂದು ಸಣ್ಣ ಘಟನೆಯಾಗಿದೆ, ಆದರೆ ಇದಕ್ಕೆ ರಾಜಕೀಯ ಬಣ್ಣ ಬಳಿದು ಒತ್ತಡ ಹೇರಲಾಗುತ್ತಿದೆ. ಕಾರಿನಲ್ಲಿದ್ದವರು ಸೈನಿಕರು ಎಂದು ನಮಗೆ ತಿಳಿದಿರಲಿಲ್ಲ. ನಮ್ಮ ಕುಟುಂಬದಲ್ಲೂ ಸೈನಿಕರಿದ್ದಾರೆ. ಯೋಧರು ಹಾಗೂ ಮಹಿಳೆಯರ ಬಗ್ಗೆ ನಮಗೆ ಗೌರವವಿದೆ ಎಂದರು.

ನನ್ನ ಅಣ್ಣ ರಫೀಕ್ ಖಾನ್ ಕಾರಿಗೆ ಅಪಘಾತವಾದ ಕಾರಣ ಸ್ಥಳಕ್ಕೆ ನಾನು ಭೇಟಿ ನೀಡಲೇಬೇಕಾಯಿತು. ಘಟನೆ ನಡೆದ ಸ್ಥಳದಲ್ಲಿ ಜನರ ದೊಡ್ಡ ಗುಂಪು ನೆರೆದಿತ್ತು. ನಾನು ಹೋದ ತಕ್ಷಣ ಕೆಲವರು ಎಲ್ಲವೂ ಸರಿಯಾಗಿದೆ ನೀವು ಹೋಗಿ ಎಂದು ಕಳುಹಿಸಿದರು. 
ಈ ಸಂದರ್ಭ ಪೊಲೀಸರು ಅಲ್ಲಿದ್ದವರ ಫೋಟೋಗಳನ್ನು ತೆಗೆಯುತ್ತಿದ್ದರು. ಫೋಟೋದಲ್ಲಿ ನಾನೂ ಇದ್ದೆ ಎನ್ನುವ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿದರು. ಈ ಬಗ್ಗೆ ಪ್ರಶ್ನಿಸಿದಾಗ “ನಮ್ಮ ಮೇಲೆ ಮೇಲಿನಿಂದ ಒತ್ತಡವಿದೆ, ನಾವು ಹೆಲ್ಪ್ ಲೆಸ್” ಎಂದು ಪೊಲೀಸರು ಉತ್ತರ ನೀಡಿರುವುದಾಗಿ ಇಸಾಕ್ ಖಾನ್ ಆರೋಪಿಸಿದರು.

ಘಟನೆ ನಡೆದ ದಿನ ರಾತ್ರಿ ನಮ್ಮ ಮನೆಯ ಬಳಿ ನಮ್ಮನ್ನು ಬಂಧಿಸಲು 25 ರಿಂದ 30 ಪೊಲೀಸರು ಸುತ್ತುವರೆದಿದ್ದರು. ನಾವು ಏನು ಮಾಡಿದ್ದೇವೆ ಎಂದು ಈ ರೀತಿ ಟಾರ್ಗೆಟ್ ಮಾಡುತ್ತಿದ್ದಾರೆ, ನಾವು ಮುಸ್ಲಿಮರು ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ನಾವು ಯಾವುದೇ ತಪ್ಪು ಮಾಡಿಲ್ಲ, ದರೋಡೆ ಮಾಡಿದ್ದರೆ ಇನ್ನೂ ಜೈಲಿನಲ್ಲೇ ಇರಬೇಕಾಗಿತ್ತು. ಸೈನಿಕ ಕುಟುಂಬದ ಮೇಲೆ ಯಾರು ಹಲ್ಲೆ ನಡೆಸಿದ್ದಾರೆ ಎಂದು ನಮಗೆ ತಿಳಿದಿಲ್ಲ. ಜಿಲ್ಲೆಯ ಜನ ಊಹಾಪೋಹಗಳಿಗೆ ಕಿವಿಗೊಡದೆ ಸತ್ಯಾಂಶವನ್ನು ತಿಳಿಯಬೇಕೆಂದು ಇಸಾಕ್ ಖಾನ್ ಮನವಿ ಮಾಡಿದರು.

ಸುಂಟಿಕೊಪ್ಪ ಗ್ರಾ.ಪಂ ಸದಸ್ಯ ರಫೀಕ್ ಖಾನ್ ಮಾತನಾಡಿ ಅಪಘಾತದಿಂದ ನನ್ನ ಕಾರಿಗೆ ಹಾನಿಯಾಗಿತ್ತು, ನಾನ್ಯಾಕೆ ಅವರ ಮೇಲೆ ಹಲ್ಲೆ ಮಾಡಲಿ, ಅಲ್ಲದೆ ಅವರು ಸೈನಿಕರು ಎಂದು ನನಗೇಗೆ ತಿಳಿಯಲು ಸಾಧ್ಯವೆಂದು ಪ್ರಶ್ನಿಸಿದರು.

ಮೊದಲು ಅವರೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನ್ನ ಕಾರಿನಲ್ಲಿ ಪತ್ನಿ ಹಾಗೂ ಮಕ್ಕಳಿದ್ದರು. ಘಟನೆಯಿಂದ ಗಾಬರಿಗೊಂಡಿದ್ದ ಅವರನ್ನು ಬೇರೆಯವರ ಕಾರಿನಲ್ಲಿ ಮನೆಗೆ ಕಳುಹಿಸಿದೆ. ನಂತರ ನಾನು ಆಸ್ಪತ್ರೆಗೆ ದಾಖಲಾಗಲೆಂದು ಮಡಿಕೇರಿಯ ಆಸ್ಪತ್ರೆಗೆ ಬಂದಿದ್ದೇನೆ. ಆಮೇಲೆ ಏನಾಯಿತ್ತೆಂದು ನನಗೆ ತಿಳಿದಿಲ್ಲ. ರಾಜಕೀಯ ಕಾರಣಕ್ಕಾಗಿ ಘಟನೆಯ ಬಗ್ಗೆ ಹಾದಿ ತಪ್ಪಿಸುವ ಯತ್ನ ನಡೆಯುತ್ತಿದೆ. ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ನಮ್ಮ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ ಅವರು, ಈ ಪ್ರಕರಣದಲ್ಲಿ ಪೊಲೀಸರಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ನಾನು ಮೊಬೈಲ್ ಕರೆ ಮಾಡಿ ಯಾರನ್ನೋ ಕರೆಸಿ ಹಲ್ಲೆ ಮಾಡಿಸಿದ್ದೇನೆ ಎಂದು ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ಆದರೆ ನನ್ನ ಮೊಬೈಲ್ ನ್ನು ಪೊಲೀಸರು ತನಿಖೆಗೆ ಒಳಪಡಿಸಿದರೆ ಸತ್ಯಾಂಶ ತಿಳಿಯಲಿದೆ. ನಾನು ಯಾರಿಗೂ ಕರೆ ಮಾಡಿ ಬರಲು ಹೇಳಿಲ್ಲ, ಹಲ್ಲೆ ಮಾಡಿದವರು ಯಾರೆಂದೇ ನನಗೆ ತಿಳಿದಿಲ್ಲ. ಚಿನ್ನಾಭರಣ ಕಸಿದು ಜೀವನ ಸಾಗಿಸುವ ಪರಿಸ್ಥಿತಿ ಕೂಡ ನನಗೆ ಬಂದಿಲ್ಲವೆಂದು ರಫೀಕ್ ಖಾನ್ ಸ್ಪಷ್ಟಪಡಿಸಿದರು.

ಯಾರೂ ಕೂಡ ಸಣ್ಣ ಘಟನೆಯನ್ನು ದೊಡ್ಡದು ಮಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡಬಾರದೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಇ.ಕರೀಂ ಹಾಗೂ ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಐ.ರಫೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News