ನನ್ನ ಸರಕಾರ 'ರಬ್ಬರ್ ಸ್ಟ್ಯಾಂಪ್ ಖಂಡಿತ ಅಲ್ಲ, ಜನಪರ ಆಡಳಿತದ ಸ್ಟ್ಯಾಂಪ್': ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-07-28 13:28 GMT

ಬೆಂಗಳೂರು, ಜು. 28: `ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ನನ್ನ ಸರಕಾರದ ಗುರಿ. ದಲಿತ, ಹಿಂದುಳಿದ, ಬಡ ಕೂಲಿ ಕಾರ್ಮಿಕ ಸೇರಿದಂತೆ ಸಮಾಜದ ಕಟ್ಟಡ ಕಡೆಯ ವ್ಯಕ್ತಿಯ ಪರವಾಗಿ ನನ್ನ ಸರಕಾರ ಕೆಲಸ ಮಾಡಲಿದೆ. ನಾನು ಯಾರ ಒಬ್ಬರ ರಬ್ಬರ್ ಸ್ಟ್ಯಾಂಪ್  ಖಂಡಿತ ಅಲ್ಲ, ನನ್ನ ಸರಕಾರ `ಜನಪರ ಆಡಳಿತದ ಸ್ಟ್ಯಾಂಪ್' ಆಗಿರುತ್ತದೆ' ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, `ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನನ್ನ ಹಾಗೂ ಸರಕಾರದ ಮಾರ್ಗದರ್ಶಕರು. ಅವರ ನೀಡಿದ ಜನಪರ ಯೋಜನೆಗಳು ಹಾಗೂ ರೀತಿ-ನೀತಿಗಳನ್ನು ಮುಂದುವರಿಸುತ್ತೇನೆ. ನಾನು ಮುಖ್ಯಮಂತ್ರಿಯಾದರೂ ಅಧಿಕಾರ ಒಂದೇ ಕಡೆ ಕೇಂದ್ರಕೃತವಲ್ಲ, ಬದಲಿಗೆ ನನ್ನೊಂದಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವೂ ಇದ್ದು ಎಲ್ಲರೂ ಒಂದು ತಂಡವಾಗಿ ಕೆಲಸ ನಿರ್ವಹಿಸಲಿದೆ' ಎಂದು ಹೇಳಿದರು.

ಪ್ರಧಾನಿ ಭೇಟಿ ಬಳಿಕ ಸಂಪುಟ ವಿಸ್ತರಣೆ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದ ಅವರು, ಈಗಾಗಲೇ ಪ್ರಧಾನಿ ಸಹಿತ ವರಿಷ್ಟರ ಭೇಟಿಗೆ ಕಾಲಾವಕಾಶ ಕೋರಿದ್ದು, ಅದಷ್ಟು ಶೀಘ್ರದಲ್ಲೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ' ಎಂದು ತಿಳಿಸಿದರು.

ಕಾರವಾರಕ್ಕೆ ಇಂದು ಭೇಟಿ: ಭೀಕರ ಪ್ರವಾಹದಿಂದ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆ(ಕಾರವಾರ)ಗೆ ನಾಳೆ(ಜು.29) ಖುದ್ದು ಭೇಟಿ ನೀಡಿಲಿದ್ದು, ಅಂಕೋಲ, ಕಾರವಾರ, ಶಿರಸಿ, ಹೊನ್ನಾವರ, ಯಲ್ಲಾಪುರ, ದಾಂಡೇಲಿ, ಕುಮಟಾ ಸೇರಿದಂತೆ ಹಲವೆಡೆ ಹಾನಿಗಿಡಾಗಿರುವ ಪ್ರದೇಶಗಳ ಪರಿಶೀಲನೆ ನಡೆಸಲಿದ್ದೇನೆ. ಆ ಬಳಿಕ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರವಾಹ ಪರಿಸ್ಥಿತಿಯಿಂದ ಆಗಿರುವ ಹಾನಿಯ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದು. ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂಬಂಧ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

`ನಮ್ಮ ಮುಂದಿರುವ ತಕ್ಷಣದ ಆದ್ಯತೆ ಪ್ರವಾಹ ಮತ್ತು ಕೋವಿಡ್ ನಿರ್ವಹಣೆ. ಸರಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಹೆಚ್ಚಿನ ಆಸ್ಥೆ ವಹಿಸಲಾಗುವುದು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗುವುದು'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News