ವರಿಷ್ಟರ ಜತೆ ಚರ್ಚಿಸಿ ಒಂದು ವಾರದಲ್ಲಿ ಸಂಪುಟ ರಚನೆ: ನಳಿನ್ ಕುಮಾರ್ ಕಟೀಲ್

Update: 2021-07-28 13:45 GMT

ಬೆಂಗಳೂರು, ಜು. 28: `ಬಿಜೆಪಿ ವರಿಷ್ಟರೊಂದಿಗೆ ಸಮಾಲೋಚನೆ ನಡೆಸಿ ಇನ್ನೂ ಒಂದು ವಾರದಲ್ಲೆ ನೂತನ ಸಚಿವ ಸಂಪುಟ ರಚನೆ ಮಾಡಲಾಗುವುದು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬುಧವಾರ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಮಾಣ ವಚನ ಸಮಾರಂಭದ ಬಳಿಕ ರಾಜಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬಿಜೆಪಿ ಎಲ್ಲರ ಸರ್ವಸಮ್ಮತ ನಾಯಕ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು, ಅವರು ಅಭಿವೃದ್ಧಿ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ' ಎಂದರು.
`ಬಿಜೆಪಿ ಪಕ್ಷದ `ಬಿ' ಫಾರಂ ಪಡೆದ ಬಳಿಕ ವಲಸಿಗರು, ಮೂಲ ಎಂಬ ಪ್ರಶ್ನೆಯೇ ಉದ್ಬವಿಸುವುದಿಲ್ಲ. ನೀವು ಹೇಳುವ ವಲಸಿಗರು ಸೇರಿ ಎಲ್ಲ ನಮ್ಮ ಪಕ್ಷದ ಕಾರ್ಯಕರ್ತರು ಎಂದ ನಳಿನ್ ಕುಮಾರ್ ಕಟೀಲ್, ನೂತನ ಸಂಪುಟದಲ್ಲಿ ಪ್ರಾದೇಶಿಕತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ಪರಿಶೀಲಿಸಿ ಸ್ಥಾನ ನೀಡಲಾಗುವುದು. ಈ ಬಗ್ಗೆ ಯಾವುದೇ ಸಂಶಯ ಬೇಡ' ಎಂದು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ವರಿಷ್ಟರ ನಿರ್ಧಾರ: `ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಪಕ್ಷದ ವರಿಷ್ಟರು ತೀರ್ಮಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಊಹಾಪೋಹಗಳಿಗೆ ಉತ್ತರಿಸುವುದಿಲ್ಲ. ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದಿದ್ದ ನಮಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಕೆಲ ವದಂತಿಗಳಿದ್ದು, ಇವುಗಳಲ್ಲಿ ಯಾವುದೇ ಹುರುಳಿಲ್ಲ' ಎಂದು ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯೆ ನೀಡಿದರು.

`ಸಚಿವ ಸಂಪುಟ ರಚನೆ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದು, ಪ್ರಧಾನಿ ಭೇಟಿ ಬಳಿಕವೇ ಸಂಪುಟ ರಚನೆಯಾಗಲಿದೆ. ಒಂದು ವಾರದಲ್ಲಿ ಸಂಪುಟ ರಚನೆ ನಿರೀಕ್ಷೆ ಇದೆ. ಹಿರಿಯರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಬಗ್ಗೆ ನಮ್ಮ ಪಕ್ಷದಲ್ಲಿ ಈ ರೀತಿಯ ಯಾವುದೇ ನಿಯಮಗಳಿಲ್ಲ. ಹಿರಿತನವನ್ನು ನೋಡಿ ಸಚಿವ ಸ್ಥಾನ ನೀಡಲಿದ್ದಾರೆ. ಬೊಮ್ಮಾಯಿ ಅವರು ದಿಲ್ಲಿಯಿಂದ ಮರಳಿದ ನಂತರವೇ ಸಂಪುಟ ರಚನೆ ಪ್ರಕ್ರಿಯೆ ಆರಂಭವಾಗಲಿದೆ'

-ಆರ್.ಅಶೋಕ್ ಮಾಜಿ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News