ಕೋವಿಡ್‍ಗೆ ಹೆಚ್ಚಿನ ಔಷಧಿ ಸಂಶೋಧನೆಗೆ ನಿರ್ದೇಶಿಸಲು ಸಾಧ್ಯವಿಲ್ಲ: ಹೈಕೋರ್ಟ್

Update: 2021-07-28 13:57 GMT

ಬೆಂಗಳೂರು, ಜು.28: ಕೋವಿಡ್‍ಗೆ ಚಿಕಿತ್ಸೆ ನೀಡಲು ನಿರ್ದಿಷ್ಟ ಔಷಧಿಯೊಂದು ಉತ್ತಮವಾಗಿದ್ದು, ಅದರ ಮೇಲೆ ಹೆಚ್ಚಿನ ಸಂಶೋಧನೆ ನಡೆಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ. ಈ ಕುರಿತು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನಿರ್ದಿಷ್ಟ ಔಷಧಿಯೊಂದು ಕೋವಿಡ್ ಸೋಂಕು ನಿವಾರಣೆಗೆ ಬಳಸಬಹುದಾಗಿದೆ. ಹೀಗಾಗಿ ಔಷಧಿಯನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸಂಶೋಧನೆ ನಡೆಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೊಲಾದಿಯ ಕಿರೀಟ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಅರ್ಜಿದಾರರು ತಾವು ಫ್ರೀಲ್ಯಾನ್ಸ್ ಮೆಡಿಕಲ್ ರೀಸರ್ಚರ್ ಆಗಿದ್ದು, ತಾವು ಸಾಕಷ್ಟು ಸಂಶೋಧನೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಅವರು ತಮ್ಮ ಸಾಧನೆ ಕುರಿತ ಯಾವುದೇ ವಿಚಾರವನ್ನೂ ಅರ್ಜಿಯಲ್ಲಿ ನಮೂದಿಸಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದೆ.

ಔಷಧಿ ಸಂಶೋಧನೆ ವಿಚಾರವನ್ನು ಪರಿಣಿತರು, ತಜ್ಞರು ನಿರ್ಧರಿಸಬಹುದಾದ ವಿಚಾರವಾಗಿದ್ದು, ಈ ಕುರಿತು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅರ್ಜಿ ವಜಾಗೊಳಿಸುವ ವೇಳೆ ಅಭಿಪ್ರಾಯಪಟ್ಟಿದೆ.

ಇನ್ನು ಕೋವಿಡ್ ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು. ಯಾವ ಔಷಧಿ ನೀಡಬೇಕು ಎಂಬುದನ್ನು ತಜ್ಞರು ನಿರ್ಧರಿಸಬೇಕು. ಇಂತಹ ವಿಚಾರಗಳನ್ನು ಕೋರ್ಟ್ ವ್ಯಾಪ್ತಿಯಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಅದರಂತೆ ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News