×
Ad

ರಾಜ್ಯ ಸರಕಾರದಿಂದ ಕೋವಿಡ್ ಸಾವು ಕುರಿತು ತಪ್ಪು ಮಾಹಿತಿ: ಕೃಷ್ಣಬೈರೇಗೌಡ

Update: 2021-07-28 20:00 IST

ಬೆಂಗಳೂರು, ಜು.28: ರಾಜ್ಯ ಸರಕಾರ ರಾಜ್ಯದಲ್ಲಿ ಕೋವಿಡ್‍ನಿಂದ ಎಷ್ಟು ಮಂದಿ ಸತ್ತಿದ್ದಾರೆಂಬ ವಾಸ್ತವ ಅಂಕಿ ಅಂಶವನ್ನು ಮುಚ್ಚಿಟ್ಟು, ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ಶಾಸಕ ಕೃಷ್ಣಬೈರೇಗೌಡ ಆರೋಪಿಸಿದ್ದಾರೆ.

ಇಲ್ಲಿನ ಕೆ.ಆರ್.ಪುರ ಉದಯನಗರ ಬ್ಲಾಕ್‍ನ ಎಚ್‍ಎಎಲ್‍ನಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಸಹಾಯಹಸ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್‍ನಿಂದಾಗಿ ಲಕ್ಷಾಂತರ ಜನ ಸತ್ತಿದ್ದಾರೆ. ಆದರೆ, ರಾಜ್ಯ ಸರಕಾರ ಮಾತ್ರ 30ಸಾವಿರ ಮಂದಿ ಸತ್ತಿದ್ದಾರೆಂದು ಸುಳ್ಳು ಹೇಳುತ್ತಿದೆ ಎಂದು ತಿಳಿಸಿದ್ದಾರೆ.

ಕೋವಿಡ್‍ನಿಂದ ಸಾವನ್ನಪ್ಪಿದವರ ಸರಿಯಾದ ಮಾಹಿತಿ ರಾಜ್ಯದ ಜನತೆಗೆ ತಿಳಿಸಬೇಕಾಗಿದೆ. ಹಾಗೂ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತಹ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ನೊಂದವರ ಪರವಾಗಿ ನಿಂತು, ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಕೋವಿಡ್ ಸಂಕಷ್ಟದ ನಡುವೆ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಏರಿಕೆಯಾಗಿದೆ. ಈ ಬಗ್ಗೆ ಕಿಂಚಿತ್ತೂ ಯೋಚಿಸದ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಧಿಕಾರ ಹಸ್ತಾಂತರ, ಆರೋಪ, ಪ್ರತ್ಯೋರೋಪ, ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಬ್ಲಾಕ್ ಅಧ್ಯಕ್ಷ ಪ್ರಸಾದ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News