ಸಂಪುಟ ಸೇರ್ಪಡೆಗೆ ಶಾಸಕರ ತೀವ್ರ ಲಾಬಿ

Update: 2021-07-28 15:37 GMT

ಬೆಂಗಳೂರು, ಜು. 28: ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೆ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಅಚ್ಚರಿಯಂತೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ ರೀತಿಯಲ್ಲೇ ಅವರ ನೇತೃತ್ವದ ಸಚಿವ ಸಂಪುಟ ರಚನೆಯೂ ಇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಸವಾಲಿನ ಹಿನ್ನೆಲೆಯಲ್ಲಿ `ಸಮರ್ಥ'ವಾಗಿ ಕಾರ್ಯನಿರ್ವಹಿಸುವ ದೃಷ್ಟಿಯಿಂದ ಹೊಸಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಜೊತೆಗೆ ನಿರ್ಗಮಿತ ಸಿಎಂ ಯಡಿಯೂರಪ್ಪ ಸಲಹೆ, ಪಕ್ಷ ನಿಷ್ಠರನ್ನು ಗಣನೆಗೆ ತೆಗೆದುಕೊಂಡು ನೂತನ ಸಚಿವ ಸಂಪುಟ ರಚನೆ ಮಾಡಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಮೂವರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆಂದು ಹೇಳಲಾಗುತ್ತಿದೆ. ದಲಿತ(ಎಡಗೈ) ಸಮುದಾಯದ ಗೋವಿಂದ ಎಂ.ಕಾರಜೋಳ, ಒಕ್ಕಲಿಗ ಸಮುದಾಯದ ಆರ್.ಅಶೋಕ್ ಹಾಗೂ ಪರಿಶಿಷ್ಟ ಪಂಗಡ(ನಾಯಕ)ದ ಬಿ.ಶ್ರೀರಾಮುಲು ಅವರಿಗೆ ಸ್ಥಾನ ನೀಡಲಿದ್ದಾರೆಂದು ಗೊತ್ತಾಗಿದೆ.

ಇದೇ ವೇಳೆ ಡಿಸಿಎಂ ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಶಶಿಕಲಾ ಜೊಲ್ಲೆ, ಪ್ರಭು ಚೌಹಾಣ್, ಕೋಟ ಶ್ರೀನಿವಾಸ ಪೂಜಾರಿ, ಆನಂದ್ ಸಿಂಗ್, ಆರ್.ಶಂಕರ್. ಶ್ರೀಮಂತ ಪಾಟೀಲ್, ಕೆ.ಗೋಪಾಲಯ್ಯ, ಶಿವರಾಮ್ ಹೆಬ್ಬಾರ್ ಹಲವು ಮಂದಿಯನ್ನು ಕೈಬಿಟ್ಟು ಪೂರ್ಣಿಮಾ ಶ್ರೀನಿವಾಸ್, ಎಂ.ಪಿ.ರೇಣುಕಾಚಾರ್ಯ, ಅಪ್ಪಚ್ಚು ರಂಜನ್, ಸುನೀಲ್ ಕುಮಾರ್, ಮಾಡಾಳು ವಿರೂಪಾಕ್ಷಪ್ಪ, ಅರಗ ಜ್ಞಾನೇಂದ್ರ, ರಾಜುಗೌಡ, ಅರವಿಂದ ಬೆಲ್ಲದ್, ರೂಪಾಲಿ ನಾಯ್ಕ್ ಸೇರಿದಂತೆ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಪ್ರವಾಹ ಹಾಗೂ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರದಲ್ಲೆ ಸಚಿವ ಸಂಪುಟ ರಚನೆ ಒತ್ತಡಕ್ಕೂ ಸಿಲುಕಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರ ಭೇಟಿಗೆ ಸಮಯಾವಕಾಶ ಕೋರಿದ್ದಾರೆ. ಅವರ ಕಾಲಾವಕಾಶ ನೀಡಿದ ಕೂಡಲೇ ದಿಲ್ಲಿಗೆ ತೆರಳಿ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂದು ಅನುಮೋದನೆ ಪಡೆದುಕೊಳ್ಳಲಿದ್ದಾರೆ. ಆ ಬಳಿಕ ಡಿಸಿಎಂ ಸೇರಿದಂತೆ ಸಂಪುಟ ರಚನೆ ಸಂಬಂಧ ತೀರ್ಮಾನ ಮಾಡಲಿದ್ದಾರೆಂದು ಹೇಳಲಾಗಿದೆ.

ಈಗಾಗಲೇ ಶಾಸಕರು ಪ್ರಾದೇಶಿಕತೆ, ಸಾಮಾಜಿಕ ನ್ಯಾಯ, ಜಿಲ್ಲಾವಾರು ಪ್ರಾತಿನಿಧ್ಯದ ಮಾನದಂಡಗಳನ್ನು ಇಟ್ಟುಕೊಂಡು ಸಚಿವ ಸ್ಥಾನಕ್ಕಾಗಿ ತೆರೆ ಮರೆಯಲ್ಲೇ ಲಾಬಿ ಆರಂಭಿಸಿದ್ದಾರೆ. ಕೆಲ ಶಾಸಕರು ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವರಿಷ್ಟರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News