ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ನೂತನ ಸಿಎಂ ಸರಿಪಡಿಸಲಿ: ಎಚ್.ಕೆ.ಪಾಟೀಲ್

Update: 2021-07-28 18:10 GMT

ಗದಗ, ಜು.28: ಉತ್ತರ ಕರ್ನಾಟಕದವರಿಗೆ ಮುಖ್ಯಮಂತ್ರಿ ಪದವಿ ದೊರಕಬೇಕು ಎಂಬುದು ಈ ಭಾಗದ ಜನರ ಬಯಕೆಯಾಗಿತ್ತು. ರಾಜಕೀಯ ಅಧಿಕಾರದ ಚುಕ್ಕಾಣಿ ಈ ಭಾಗದವರಿಗೆ ದೊರೆತಿಲ್ಲ. ಈ ಕಾರಣಕ್ಕಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಮನಸ್ಸುಗಳು ಅಭಿವೃದ್ಧಿ ವಿಚಾರದಲ್ಲಿ ಆಗಿರುವ ಅನ್ಯಾಯದಿಂದ ಘಾಸಿಗೊಂಡಿವೆ. ಇವತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವುದು ಸಂತಸ ತಂದಿದೆ. ಅವರು ನನ್ನ ಸ್ನೇಹಿತರು, ಉತ್ತಮ ಆಡಳಿತಗಾರರು, ಭಾಷಣಕಾರರು ಹೌದು. ಅವರ ಆಡಳಿತ ಕಾಲದಲ್ಲಿ ಎಲ್ಲ ಒಳ್ಳೆಯದಾಗಲಿ. ಜೊತೆಗೆ, ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ, ನ್ಯಾಯ ಸಿಗುವಂತಾಗಲಿ ಎಂದು ಹಾರೈಸಿದರು.

ಉತ್ತರ ಕರ್ನಾಟಕ ಭಾಗದ ಮಹದಾಯಿ ನದಿಯ ಜೋಡಣೆ ಯೋಜನೆ, ಕೃಷ್ಣಾ ನದಿಯ ಬಹಳಷ್ಟು ಕೆಲಸವಾಗಬೇಕಿದೆ. ಕೃಷ್ಪಾ ಮೇಲ್ದಂಡೆ ಯೋಜನೆಯ ಮುಂದುವರೆದ ಭಾಗ ಸ್ಥಗಿತಗೊಂಡಿದೆ, ಅಲ್ಲದೆ ಹಲವಾರು ಯೋಜನೆಗಳು ನನೆಗುದಿಗೆ ಬಿದ್ದಿವೆ. ಅಂತಹ ಯೋಜನೆಗಳನ್ನು ಕೈಗೆತ್ತಿಕೊಂಡು ಜಾರಿಗೆ ತರುವ ಕೆಲಸವಾಗಬೇಕು ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಅನುದಾನಿತ ಸಂಸ್ಥೆಗಳು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಿವೆ. ಅನುದಾನಕ್ಕೆ ಒಳಪಡದ ಸಾವಿರ ಸಾವಿರ ಶಿಕ್ಷಣ ಸಂಸ್ಥೆಗಳು ಇದ್ದು ಅವುಗಳ ಬಗ್ಗೆ ವಿಶೇಷ ಕಾಳಜಿ ತಗೆದುಕೊಳ್ಳಬೇಕಿದೆ. ಉತ್ತರ ಕರ್ನಾಟಕದ ಭಾಗದ ಜನರ ಬೇಡಿಕೆಗಳಿಗೆ ವಿಶೇಷವಾದ ಗಮನ ಹರಿಸಬೇಕು ಎಂದು ಎಚ್.ಕೆ.ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News