ಕೆ.ಎಸ್.ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡಬೇಕು : ಮಠಾಧೀಶರ ಒತ್ತಾಯ

Update: 2021-07-29 13:56 GMT

ಬೆಂಗಳೂರು, ಜು. 29: `ಕುರುಬ ಸಮುದಾಯದ ಹಿರಿಯ ಮುಖಂಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕು' ಎಂದು ವಿವಿಧ ಮಠಾಧಿಪತಿಗಳು ಆಗ್ರಹಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, `ಬಿಜೆಪಿ ವರಿಷ್ಠರು, ಈಶ್ವರಪ್ಪ ಅವರಿಗೆ ಸಂಪುಟ ರಚನೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ರಾಜ್ಯ ಸರಕಾರ ರಚನೆಗೆ ಹಲವರು ಕಾರಣರಾಗಿದ್ದಾರೆ. ಅದು ನಿಜ. ಆದರೆ, ಈಶ್ವರಪ್ಪ ಅವರನ್ನು ಕಡೆಗಣಿಸದೆ ಸೂಕ್ತ ಸ್ಥಾನ ನೀಡಬೇಕು' ಎಂದು ಮನವಿ ಮಾಡಿದರು.

`ಹಿರಿಯ ಮುಖಂಡ ಈಶ್ವರಪ್ಪ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಕೇಳಿ ಪಡೆಯಬಾರದು. ಬಿಜೆಪಿಗಾಗಿ ಈಶ್ವರಪ್ಪ ಇದುವರೆಗೂ ದುಡಿದಿದ್ದಾರೆ. ಅದರ ಫಲವಾಗಿ ಈ ಸ್ಥಾನ ದೊರೆಯಬೇಕು. ನಾವೆಲ್ಲರೂ ಉತ್ತರ ಕರ್ನಾಟಕದ ಸ್ವಾಮೀಜಿಗಳು, ಎಲ್ಲರೂ ಒಟ್ಟಾಗಿ ಕೆ.ಎಸ್.ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನಮಾನ ಕೊಡಿ ಎಂದು ಕೇಳುತ್ತಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಈಶ್ವರಪ್ಪ ಅವರೂ ಪಕ್ಷ ಕಟ್ಟಿದ್ದಾರೆ. ಅವರಿಗೆ ಅನ್ಯಾಯವಾಗಬಾರದು' ಎಂದು ಸ್ವಾಮೀಜಿಗಳು ಕೋರಿದರು.

`ಈಶ್ವರಪ್ಪ ಪಕ್ಷದ ಬಗ್ಗೆ ನಿಷ್ಠೆ ಹೊಂದಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸ್ಥಾನದ ಗೊಂದಲ ಬಗೆಹರಿದಿದೆ. ಬಿಜೆಪಿಗೆ ವಲಸೆ ಬಂದಿರುವ ಎಲ್ಲರನ್ನೂ ಪರಿಗಣಿಸಬೇಕು. ಯಾರನ್ನೂ ಕಡೆಗಣಿಸಬಾರದು. ಇದನ್ನು ವರಿಷ್ಠರು ನಡೆಸಿಕೊಡಬೇಕು. ಒಂದು ವೇಳೆ ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ದೊರೆಯದಿದ್ದರೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ' ಎಂದು ಸ್ವಾಮೀಜಿಗಳು ಎಚ್ಚರಿಕೆ ನೀಡಿದರು.
`ಒಬ್ಬರಿಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೆ ಈಶ್ವರಪ್ಪ ಅವರನ್ನು ಒಂದು ಬಾರಿಯಾದರೂ ಮುಖ್ಯಮಂತ್ರಿ ಮಾಡಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಈಶ್ವರಪ್ಪ ಎಂದೂ ಪಕ್ಷವನ್ನು ಬಿಟ್ಟು ಹೋದವರಲ್ಲ. ಹೀಗಾಗಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕು' ಎಂದು ಆಗ್ರಹಪಡಿಸಿದರು.

ಮಖಣಾಪೂರ ಗುರುಪೀಠದ ಸೋಮಲಿಂಗೇಶ್ವರ ಸ್ವಾಮಿ, ರೇವಣಸಿದ್ದೇಶ್ವರ ಗುರುಪೀಠದ ಶಾಂತಮಯ ರೇವಣಸಿದ್ದೇಶ್ವರ ಸ್ವಾಮಿ, ಅಥಣಿಯ ಸಿದ್ಧಸಿರಿ ಸಿದ್ಧಾಶ್ರಮ ಕೌಲಗುಡ್ಡ ಹಣಮಾಪೂರ ಸಿದ್ದಯೋಗಿ ಅಮರೇಶ್ವರ ಮಹಾರಾಜ ಹಾಗೂ ಗಣಿ ಆಶ್ರಮದ ಚಿನ್ಮಯಾನಂದ ಸ್ವಾಮಿ, ಸುಕ್ಷೇತ್ರ ಹುಲಜಂತಿ ಮಾಳಿಂಗರಾಯ ಮಹಾರಾಜ, ತುಮಕೂರಿನ ಬಿಂದುಶೇಖರ ಸ್ವಾಮಿ, ನಾಗರಾಳ ಅಮೋಘಸಿದ್ದೇಶ್ವರ ಆಶ್ರಮ ಲಕ್ಕಪ ಮಹಾರಾಜ, ಸುಜ್ಞಾನ ಕುಟೀರ ಕೋಳಿಗುಡ್ಡ ಸ್ವರೂಪಾನಂದ ಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News