ಪ್ರಧಾನಿ, ಗೃಹ ಸಚಿವರ ಭೇಟಿಗೆ ಶೀಘ್ರವೆ ಹೊಸದಿಲ್ಲಿ ಭೇಟಿ: ಸಿಎಂ ಬಸವರಾಜ ಬೊಮ್ಮಾಯಿ

Update: 2021-07-29 12:29 GMT

ಬೆಂಗಳೂರು, ಜು.29: ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ಶೀಘ್ರವೆ ಹೊಸದಿಲ್ಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗುರುವಾರ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಲ್ಲಿಗೆ ತೆರಳಲು ವರಿಷ್ಠರ ಸಮಯ ಕೋರಿದ್ದೇನೆ. ಅವರು ಕಾಲಾವಕಾಶ ಕೊಟ್ಟರೆ ನಾಳೆ ಬೆಳಗ್ಗೆಯೇ ಹೋಗುವ ಚಿಂತನೆ ಇದೆ. ಆದರೆ, ಇನ್ನು ಯಾವುದೂ ಅಂತಿಮವಾಗಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೂರವಾಣಿ ಕರೆ ಮಾಡಿ ಮಾತನಾಡಿ, ಶುಭ ಕೋರಿದ್ದಾರೆ. ಒಳ್ಳೆಯ ಆಡಳಿತ ಕೊಡಿ, ನಿಮ್ಮ ಮೇಲೆ ವಿಶ್ವಾಸವಿದೆ ಎಂದು ಹೇಳಿದರು. ದಿಲ್ಲಿ ಭೇಟಿ ವೇಳೆ ನಮ್ಮ ರಾಜ್ಯದ ಸಂಸತ್ ಸದಸ್ಯರು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ರಾಜ್ಯದ ಬಾಕಿ ಇರುವ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಚರ್ಚಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಿರುವ ಜಿಎಸ್‍ಟಿ ಪಾಲನ್ನು ಪಡೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ವರ್ಷ 18 ಸಾವಿರ ಕೋಟಿ ರೂ. ಜಿಎಸ್‍ಟಿ ಪರಿಹಾರ ಕೊರತೆ ಇದ್ದು, ಅದನ್ನು ಸೆಸ್ ಮೂಲಕ ಅವರೇ ಸಾಲ ತೀರಿಸಲು ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಳೆಯಿಂದ ಅಪಾರ ಹಾನಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸೇರಿದಂತೆ ಇನ್ನಿತರ ಕಡೆ ಪರಿಶೀಲನೆ ನಡೆಸಿ, ಹಾನಿಯ ಬಗ್ಗೆ ಸಮೀಕ್ಷೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಯಾವ ರೀತಿಯ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡುತ್ತೇನೆ. ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರವಾಹ ಪೀಡಿತ ಇತರ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದರು.

ದಿಲ್ಲಿ ಭೇಟಿ ವೇಳೆ ಸಚಿವ ಸಂಪುಟ ರಚನೆ ಕುರಿತು ಚರ್ಚೆ ಸಾಧ್ಯವಾಗುವುದಿಲ್ಲ. ಮುಂದಿನ ಭೇಟಿಯಲ್ಲಿ ಸಚಿವ ಸಂಪುಟ ರಚನೆಗೆ ಅವಕಾಶ ಸಿಗಬಹುದು. ನೂತನ ಸರಕಾರ ಅಸ್ತಿತ್ವಕ್ಕೆ ಬಂದಾಗ ಶಾಸಕರು ಸಂಪುಟ ಸೇರಲು ಒತ್ತಡ ಹೇರುವುದು ಸಹಜವಾದದ್ದು ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News