ಡಿಸಿಎಂ ಸ್ಥಾನಕ್ಕಾಗಿ ನಾನು ಮುನಿಸಿಕೊಂಡಿಲ್ಲ: ಶ್ರೀರಾಮುಲು

Update: 2021-07-29 13:10 GMT

ಬೆಂಗಳೂರು, ಜು. 29: `ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನನಗೆ ಉಪ ಮುಖ್ಯಮಂತ್ರಿ ಸ್ಥಾನ ಘೋಷಿಸಿಲ್ಲವೆಂದು ಮುನಿಸಿಕೊಂಡು ಗೈರು ಹಾಜರಾಗಿಲ್ಲ. ಬದಲಿಗೆ, ಮನೆಯಲ್ಲಿ ವಿಶೇಷ ಪೂಜೆ ಇದ್ದುದ್ದರಿಂದ ಕುಟುಂಬದ ಜತೆ ಪಾಲ್ಗೊಳ್ಳಬೇಕಿತ್ತು, ಹೀಗಾಗಿ ಬಂದಿದ್ದೇನೆ. ಉದ್ದೇಶಪೂರ್ವಕವಾಗಿ ಸಿಎಂ ಕಾರ್ಯಕ್ರಮಕ್ಕೆ ಗೈರು ಹಾಜರಾಗಿಲ್ಲ' ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನಾನು ಜನ ಬೆಂಬಲದಿಂದ ಮೇಲೆ ಬಂದಿದ್ದೇನೆ. ನನಗೆ ಪಕ್ಷ ಮುಖ್ಯವೇ ಹೊರತು ಅಧಿಕಾರವಲ್ಲ. ಪಕ್ಷ ಇದುವರೆಗೆ ನನ್ನನ್ನು ಗೌರವದಿಂದ ಕಂಡಿದೆ. ಎಲ್ಲ ಸ್ಥಾನಮಾನ ನೀಡಿದೆ. ನೂತನ ಸಂಪುಟದಲ್ಲಿಯೂ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ' ಎಂದು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

`ನಾನು ಏಳು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಆರು ಬಾರಿ ಆಯ್ಕೆಯಾಗಿದ್ದೇನೆ. ಮೂರು ಅವಧಿಯಲ್ಲಿ ಮಂತ್ರಿಯಾಗಿದ್ದೆ. ವಾಲ್ಮೀಕಿ ಸಮುದಾಯದ ಕೋಟಾದಲ್ಲಿ ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ನಾನು, ರಮೇಶ್ ಜಾರಕಿಹೊಳಿ ಪ್ರತಿಸ್ಪರ್ಧಿಗಳಲ್ಲ. ಈ ವಿಷಯದಲ್ಲಿ ಪಕ್ಷದ ವರಿಷ್ಠರ ತೀರ್ಮಾನವನ್ನು ಗೌರವಿಸುತ್ತೇನೆ' ಎಂದು ರಾಮುಲು ಇದೇ ವೇಳೆ ಸ್ಪಷ್ಟಣೆ ನೀಡಿದರು.

`ಸಿಎಂ ಬಸವರಾಜ ಬೊಮ್ಮಾಯಿ ಮತ್ತು ನಾನು ಒಳ್ಳೆಯ ಸ್ನೇಹಿತರು. ಬಹಳ ವರ್ಷದಿಂದ ಅವರನ್ನು ಬಲ್ಲೆ. ಸಂಕಷ್ಟದ ಸಂದರ್ಭದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮೊನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಸ್ಥಾನಕ್ಕೆ ನಾನೇ ಅವರ ಹೆಸರನ್ನು ಅನುಮೋದಿಸಿದೆ. ಅವರಿಗೆ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದ ಅವರು, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಅವರು ಸಂಪುಟ ರಚನೆ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದರು.

ನೂತನ ಸಿಎಂ ಬೊಮ್ಮಾಯಿ ಅವರು ಯಾರೊಬ್ಬರ ನೆರಳು ಅಲ್ಲ. ಅವರಿಗೆ ಸ್ವಯಂ ತೀರ್ಮಾನ ಕೈಗೊಳ್ಳುವ ಹಾಗೂ ಸ್ವಾತಂತ್ರವಾಗಿ ಕೆಲಸ ಮಾಡುವ ಸಾಮಥ್ರ್ಯವಿದೆ. ಈ ಹಿಂದೆ ಬಿ.ವೈ.ವಿಜಯೇಂದ್ರ ಅವರ ವಿಷಯದಲ್ಲೂ ಹೀಗೇ ಹೇಳಲಾಗುತಿತ್ತು. ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಬೊಮ್ಮಾಯಿ ಅವರು ಉತ್ತಮ ಆಡಳಿತ ಕೊಡಲಿದ್ದಾರೆ ಎಂದು ಶ್ರೀರಾಮುಲು ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News