ನೂತನ ಸಿಎಂ ಬೊಮ್ಮಾಯಿ ಅವರನ್ನು ಕೇಂದ್ರ ಇಕ್ಕಟ್ಟಿಗೆ ಸಿಲುಕಿಸದಿರಲಿ: ಎಚ್.ಡಿ.ಕುಮಾರಸ್ವಾಮಿ

Update: 2021-07-29 13:14 GMT

ಬೆಂಗಳೂರು, ಜು. 29: `ಕೇಂದ್ರ ಸರಕಾರ, ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸದೆ ರಾಜ್ಯಕ್ಕೆ ಬರಬೇಕಿರುವ ಜಿಎಸ್ಟಿ ಬಾಕಿ ಹಣ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಕರ್ನಾಟಕಕ್ಕೆ ನೀಡಬೇಕಿರುವ ರಾಜ್ಯದ ಪಾಲಿನ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಗುರುವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬಿಎಸ್‍ವೈ ಅವರು ಸಿಎಂ ಆಗಿದ್ದ ಎರಡು ವರ್ಷದ ಅವಧಿಯಲ್ಲಿ ಕೇಂದ್ರ ಸರಕಾರ ಸರಿಯಾದ ಸಹಕಾರ ನೀಡಲಿಲ್ಲ. ರಾಜ್ಯಕ್ಕೆ ನೀಡಬೇಕಾದ ನೆರವು ಸರಿಯಾಗಿ ನೀಡಲಿಲ್ಲ. ಈಗಿನ ಮುಖ್ಯಮಂತ್ರಿಗೂ ಅದೇ ರೀತಿ ಮಾಡಬಾರದು. ಹಲವು ಇಲಾಖೆಗಳ ಮೂಲಕ ರಾಜ್ಯಕ್ಕೆ ಬಿಡುಗಡೆ ಮಾಡಬೇಕಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ನೀರಾವರಿ ಯೋಜನೆಗಳ ಆದ್ಯತೆ ಏನೆಂಬುದು ಅರಿವಿದೆ. ಅವರ ಇತಿಮಿತಿ ಏನು ಎಂಬುದು ನಮಗೂ ಗೊತ್ತಿದೆ. ಬಿಜೆಪಿ ನಾಯಕರೆಲ್ಲರೂ ಸಿಎಂಗೆ ಅಗತ್ಯ ಸಹಕಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಮಹದಾಯಿ, ಮೇಕೆದಾಟು ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು ಎಂದು ಕೋರಿದರು.

`ಸಂಧ್ಯಾ ಸುರಕ್ಷಾ ಮಾಶಾಸನ ಯೋಜನೆ 1 ಸಾವಿರ ರೂ.ನಿಂದ 1,200 ರೂ.ಗಳಿಗೆ, ವಿಧವಾ ವೇತನ, ವಿಕಲಚೇತನರ ವೇತನವನ್ನು ಹೆಚ್ಚಿಸಿದ್ದಾರೆ. ಆದರೆ, ಆರೇಳು ತಿಂಗಳಿನಿಂದ ಮಾಶಾಸನವೇ ಬಿಡುಗಡೆಯಾಗಿಲ್ಲ. ಇದು ಘೋಷಣೆಯಾಗಿ ಉಳಿಯಬಾರದು ಎಂದ ಕುಮಾರಸ್ವಾಮಿ, ಪಿಂಚಣಿ ಯೋಜನೆಗಳು ಬಡಜನರಿಗೆ ಅನುಕೂಲವಾಗಲಿವೆ. ತಾವು 2ನೆ ಬಾರಿ ಸಿಎಂ ಆಗಿದ್ದ ವೇಳೆ ಸಂಧ್ಯಾ ಸುರಕ್ಷಾ ಯೋಜನೆ ಮೊತ್ತ 2 ಸಾವಿರ ರೂ.ಗೆ ಹೆಚ್ಚಳ ಮಾಡಿ ಬಜೆಟ್ ಅನುಮೋದನೆ ಪಡೆಯಲಾಗಿತ್ತು. ಆದರೆ, ಅದು ಸಾಕಾರಗೊಳ್ಳಲಿಲ್ಲ ಎಂದರು.
ಕೋವಿಡ್‍ನಿಂದ ಮೃತಪಟ್ಟಿರುವ ಬಿಪಿಎಲ್ ಕಾರ್ಡುದಾರರ ಕುಟುಂಬದವರಿಗೆ 1ಲಕ್ಷ ರೂ.ಪರಿಹಾರ ಘೋಷಣೆಯನ್ನು ಹಿಂದಿನ ಮುಖ್ಯಮಂತ್ರಿ ಮಾಡಿದ್ದರು. ಅದು ಇನ್ನೂ ಆದೇಶವಾಗಿ ಹೊರಬಿದ್ದಿಲ್ಲ. ಅಲ್ಲದೆ, ಪ್ರವಾಹ ಸಂತ್ರಸ್ತರಿಗೆ 2019ರ ಪರಿಹಾರವನ್ನು ಇನ್ನೂ ನೀಡಿಲ್ಲ. ಸಂತ್ರಸ್ತರು ಇನ್ನೂ ಬೀದಿಯಲ್ಲೆ ಇದ್ದು ಅವರಿಗೆ ಸರಕಾರ ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

`ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂಲತಃ ಜನತಾ ಪರಿವಾರದವರು. ಈಗ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಹಳೆಯ ಸ್ನೇಹಿತರು, ಹಿತೈಷಿಗಳು. ಅವರು ಒಳ್ಳೆಯ ಕೆಲಸ ಮಾಡಲಿ. ಅವರಿಗೆ ಅನುಭವವಿದೆ. ಬಿಜೆಪಿಯಿಂದ ಆಯ್ಕೆ ಆಗಿದ್ದರೂ ಅವರು ಜನತಾದಳದವರೇ ಮುಖ್ಯಮಂತ್ರಿಗಳು ಆಗಿದ್ದಾರೆಂಬ ಭಾವನೆ ನಮಗೆ ಇದೆ'

-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News