ನಾನು ಜಗದೀಶ್‌ ಶೆಟ್ಟರ್‌ ರಂತೆ ಸಂಪುಟಕ್ಕೆ ಸೇರಲ್ಲ ಎಂದು ಹೇಳುವುದಿಲ್ಲ: ಕೆ.ಎಸ್‌. ಈಶ್ವರಪ್ಪ

Update: 2021-07-29 13:40 GMT

ಶಿವಮೊಗ್ಗ, ಜು.29: ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ರೆ ನಾನು ಬೇಡ ಎನ್ನುವುದಿಲ್ಲ. ಆದರೆ, ಅದಕ್ಕಾಗಿ ಲಾಬಿ ಮಾಡುವುದಿಲ್ಲಎಂದು ಶಾಸಕ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಯಾವುದೇ ಗೊಂದಲವಿಲ್ಲದೇ ಸರ್ವಸಮ್ಮತಿ ಮೇರೆಗೆ ಮುಖ್ಯಮಂತ್ರಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ನವರ ನಿರೀಕ್ಷೆ ಸುಳ್ಳಾಗಿ ಅವರಿಗೆ ನಿರಾಶೆ ತಂದಿದೆ. ಯಾವ ಗೊಂದಲಗಳು ಇಲ್ಲದೇ ರಾಷ್ಟ್ರೀಯ ನಾಯಕರು ಅತ್ಯಂತ ಸರಳವಾಗಿ ಬಗೆಹರಿಸಿದ್ದಾರೆ ಎಂದರು.

ಹಲವು ಸಂಘ, ಸಂಸ್ಥೆಗಳು ಅಭಿಮಾನಿಗಳು ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆ. ನಾನೊಬ್ಬ ಪಕ್ಷ ದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಈ ಹಿಂದೆ ಸಚಿವ ಸ್ಥಾನದಲ್ಲಿದ್ದರೂ ಕೂಡ ಅದನ್ನು ಬಿಟ್ಟು ವರಿಷ್ಠರ ತೀರ್ಮಾನದಂತೆ ರಾಜ್ಯಾಧ್ಯಕ್ಷ ನಾಗಿ ಕೆಲಸ ಮಾಡಿದ್ದೇನೆ. ಪಕ್ಷ ದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಮಂತ್ರಿ ಸ್ಥಾನವನ್ನಾದರೂ ಕೊಡಲಿ, ಉಪ ಮುಖ್ಯಮಂತ್ರಿ ಸ್ಥಾನವನ್ನಾದರೂ ಕೊಡಲಿ ಇಲ್ಲವೇ ಶಾಸಕನಾಗಿ ಉಳಿದು ಪಕ್ಷ  ಸಂಘಟನೆ ಮಾಡುವ ಜವಾಬ್ದಾರಿ ನೀಡಿದರೂ ಅದನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದರು.

ರಾಮ ರಾಜ್ಯ ಪರಿಕಲ್ಪನೆಯ ಆಡಳಿತ ನಡೆಸಲು ಕೆಲವೊಮ್ಮೆ ಶ್ರೀಕೃಷ್ಣನ ತಂತ್ರಗಾರಿಕೆಯೂ ಅಗತ್ಯ. ಇದೇ ಮೇಲ್ಪಂಕ್ತಿಯನ್ನು ನಮ್ಮ ವರಿಷ್ಠರು ಹಾಕಿಕೊಟ್ಟಿದ್ದು,  ಕೃಷ್ಣನ ತಂತ್ರಗಾರಿಕೆಯೂ ಕೆಲವೊಮ್ಮೆ ರಾಜಕೀಯದಲ್ಲಿಅನಿವಾರ್ಯವಾಗಿರುತ್ತದೆ. ಆ ಅನಿವಾರ್ಯತೆಯೇ ಇಂದಿನ ರಾಜಕಾರಣವಾಗಿದೆ. ಆದರೆ, ಮುಂದಿನ ಚುನಾವಣೆಯಲ್ಲಿಬಿಜೆಪಿ ಪೂರ್ಣ ಬಹುಮತ ಪಡೆದು ರಾಮರಾಜ್ಯವನ್ನು ಸ್ಥಾಪಿಸುತ್ತದೆ ಎಂದರು.

ಜಗದೀಶ್‌ ಶೆಟ್ಟರ್‌ ಸಂಪುಟಕ್ಕೆ ಸೇರಲ್ಲಎಂದು ಹೇಳಿದ್ದಾರೆ. ಆದರೆ, ನಾನು ಹಾಗೇ ಹೇಳುವುದಿಲ್ಲ. ರಾಜಕಾರಣ ಸಾಕು ಎನ್ನುವುದೂ ಇಲ್ಲ. ಪಕ್ಷ ದ ತೀರ್ಮಾನಕ್ಕೆ ಬದ್ಧನಾಗಿಯೇ ಇರುತ್ತೇನೆ. ಉಪ ಮುಖ್ಯಮಂತ್ರಿ ಆಕಾಂಕ್ಷಿ ಎಂದ ಮಾತ್ರಕ್ಕೆ ಲಾಬಿ ಮಾಡಲಾರೆ. ನನಗೆ ಲಾಬಿ ಎಂಬ ಪದದ ಅರ್ಥವೇ ಗೊತ್ತಿಲ್ಲಎಂದು ಹೇಳಿದರು.

ಸಿಎಂ ಹಾಗೂ ಸಂಪುಟ ಬದಲಾದರೂ ಶಿವಮೊಗ್ಗದ ಘೋಷಿತ ಮತ್ತು ಚಾಲ್ತಿಯಲ್ಲಿರುವ ಯಾವ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ. ಶಿವಮೊಗ್ಗಕ್ಕೆ ಮತ್ತಷ್ಟು ಯೋಜನೆ ತರಲಿದ್ದೇವೆ. ಮುಂದಿನ ದಿನಗಳಲ್ಲಿಬಿಜೆಪಿ ಜಿಲ್ಲೆಯಲ್ಲಿಮತ್ತಷ್ಟು ಪ್ರಬಲವಾಗಲಿದೆ. ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿಬಿಜೆಪಿ ಜಯಭೇರಿ ಬಾರಿಸಲಿದೆ. ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆಯಿಂದ ಯಾವ ಬದಲಾವಣೆಯೂ ಆಗುವುದಿಲ್ಲಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್‌ ಸುನಿತಾ ಅಣ್ಣಪ್ಪ, ಉಪ ಮೇಯರ್‌ ಶಂಕರ್‌ ಗನ್ನಿ, ಜ್ಞಾನೇಶ್ವರ್‌, ಚೆನ್ನಬಸಪ್ಪ, ವಿಶ್ವಾಸ್‌, ಕೆ.ವಿ. ಅಣ್ಣಪ್ಪ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News