ಸಿರಿಮನೆ ಜಲಪಾತದ ಬಳಿ ಅರಣ್ಯ ಒತ್ತುವರಿ: ಕ್ರಮದ ಕುರಿತು ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

Update: 2021-07-29 15:15 GMT

ಬೆಂಗಳೂರು, ಜು.29: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ಬಳಿಯ ಅರಣ್ಯ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಕುರಿತು ಜಿ.ಎನ್.ರಾಮಚಂದ್ರ ರಾವ್ ಸೇರಿ ಐವರು ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಿತು. 

ವಕೀಲರ ವಾದ ಆಲಿಸಿದ ನ್ಯಾಯಪೀಠ, 2021ರ ಮೇ 26ರಂದು ರಾಜ್ಯ ಸರಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಲಾಗಿದೆ. ಅದರಂತೆ, ಒತ್ತುವರಿದಾರರಿಗೆ ನೀಡಲಾಗಿರುವ ನೋಟಿಸ್‍ಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗಿದೆ. ಈ ನಿಟ್ಟಿನಲ್ಲಿ ಒತ್ತುವರಿಗಳನ್ನು ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳ ವರದಿಯನ್ನು ಆ.31ರೊಳಗೆ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿ, ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿತು.

ಶೃಂಗೇರಿ ತಾಲೂಕಿನ ಎರಡದಹಳ್ಳಿ ಗ್ರಾಮದಲ್ಲಿ ಕೆಲ ಭೂ ಒತ್ತುವರಿದಾರರು ಅಭಿವದ್ಧಿ ನೆಪದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಸರಕಾರಿ ಆಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಜಲಪಾತದ ಬಳಿ ಅನಧಿಕತ ಕಟ್ಟಡ ನಿರ್ಮಾಣ ನಿಲ್ಲಿಸಲು ಮತ್ತು ಜಲಪಾತದ ಸುತ್ತಲಿನ ಪ್ರದೇಶ ಸಂರಕ್ಷಿಸಲು ಸರ್ಕಾರಕ್ಕೆ ನಿರ್ದೇಶಿಸಿವಂತೆ ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News