ಕಾಂಗ್ರೆಸ್ ಗೆ ಮಧು ಬಂಗಾರಪ್ಪ ಸೇರ್ಪಡೆ

Update: 2021-07-30 11:49 GMT

ಶಿವಮೊಗ್ಗ : ಮಾಜಿ ಶಾಸಕ ಮಧು ಬಂಗಾರಪ್ಪ ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಹುಬ್ಬಳಿಯ ಗೋಕುಲ ಗಾರ್ಡನ್ ನಲ್ಲಿ ಶುಕ್ರವಾರ  ನಡೆದ  ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ, ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ತಂಡ ಪಕ್ಷದ ಧ್ವಜ ನೀಡುವ ಮೂಲಕ  ಪಕ್ಷಕ್ಕೆ ಬರ ಮಾಡಿಕೊಂಡರು. ಇದೇ ಸಂದರ್ಭ  ಮಧು ಬಂಗಾರಪ್ಪ ಜೊತೆ ಹಲವು ಮಂದಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.

ಕಳೆದ ಲೋಕಸಭಾ ಚುನಾವಣಾ ನಂತರ ಜೆಡಿಎಸ್ ನ ಸಕ್ರೀಯ ಚಟುವಟಿಕೆಗಳಿಂದ ದೂರವಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಗೆ ಅಧಿಕೃತ ವಾಗಿ ಸೇರ್ಪಡೆಗೊಂಡಿದ್ದಾರೆ.

ಈ ಸಂದರ್ಭ ಎ.ಐ.ಸಿ.ಸಿ ಕಾರ್ಯದರ್ಶಿ ಮಧು ಯಾಕ್ಷಿಗೌಡ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ಶಾಸಕ ಪ್ರಸಾದ್ ಅಬ್ಬಯ್ಯ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಆರ್.ಎಂ.ಮಂಜುನಾಥ ಗೌಡ, ಕಾಂಗ್ರೆಸ್ ಮುಖಂಡರಾದ ಜಿ.ಡಿ.ಮಂಜುನಾಥ್ ಹಾಗೂ ಮಧು ಬಂಗಾರಪ್ಪ ಅವರ ಬೆಂಬಲಿಗರು ಹಾಜರಿದ್ದರು.

ಸಮೂಹ ನಾಯಕ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, `ಮಾಜಿ ಸಿಎಂ ಎಸ್.ಬಂಗಾರಪ್ಪ ಜಾತಿಯ ನಾಯಕರಲ್ಲ. ಅವರು ಕೇವಲ ಒಂದು ಜಾತಿಯ ನಾಯಕರಾಗಿರಲಿಲ್ಲ. ಅವರೊಬ್ಬ ಸಮೂಹ ನಾಯಕರಾಗಿದ್ದರು. ಇಡೀ ರಾಜ್ಯ ಒಪ್ಪುವಂತ ನಾಯಕರಾಗಿದ್ದರು. ಮಧು ಬಂಗಾರಪ್ಪನವರಿಗೂ ಆ ಶಕ್ತಿ ಇದೆ. ಇಡೀ ರಾಜ್ಯದಲ್ಲಿ ಅವರಿಗೆ ಬೆಂಬಲಿಗರಿದ್ದರು. ಅದನ್ನ ನೀವು ಮುಂದುವರೆಸಬೇಕು' ಎಂದು ಸಲಹೆ ನೀಡಿದರು.

`ರಾಜ್ಯದಲ್ಲಿ ಇದೀಗ ಸನ್ನಿವೇಶ ಹೇಗಿದೆ ಎಂದರೆ ಯಡಿಯೂರಪ್ಪ ರಾಜಕೀಯ ಅಂತ್ಯ ಆಗುತ್ತಿದೆ. ಅವರನ್ನು ಸಿಎಂ ಸ್ಥಾನದಿಂದ ತೆಗೆದಿದ್ದಾರೆ. ನೀವು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೀರಿ. ಬಂಗಾರಪ್ಪನವರ ವಾರಸುದಾರರಾಗಿ ಕೆಲಸ ಮಾಡಿ. ಇಡೀ ರಾಜ್ಯ ಸುತ್ತಾಡುವ ಶಕ್ತಿ ನಿಮಗೆ ಇದೆ. ಬಂಗಾರಪ್ಪನವರು ಸಿಎಂ ಆಗಿದ್ದಾಗ ನಾನು ಕಾಂಗ್ರೆಸ್‍ನಲ್ಲಿ ಇರಲಿಲ್ಲ. ಬಂಗಾರಪ್ಪನವರಿಲ್ಲದೆ ಕಾಂಗ್ರೆಸ್ ಏನು ನಷ್ಟ ಆಗಿತ್ತೋ, ಅದನ್ನು ತುಂಬೋ ಕೆಲಸ ನೀವು ಮಾಡಬೇಕು' ಎಂದು ಅವರು ಸೂಚನೆ ನೀಡಿದರು.

ನನ್ನ ಭಾಗ್ಯ: `ನಾನು ಬಂಗಾರಪ್ಪನವರ ಗರಡಿಯಲ್ಲಿ ಬೆಳೆದವನು. ನನ್ನ ರಾಜಕೀಯ ಗುರುಗಳ ಮಗನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ನನ್ನ ಭಾಗ್ಯ' ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಲವು ದಿನಗಳಿಂದ ಮಧುಗೆ ನಾನು ಗಾಳ ಹಾಕಿದ್ದೆ. ಆದರೆ, ಆ ಮೀನು ಕಚ್ಚಲಿಲ್ಲ. ಕಚ್ಚಿದ್ದರೆ ಈ ವೇಳೆಗಾಗಲೇ ಅವರು ಮಾಜಿ ಮಂತ್ರಿಯಾಗುತ್ತಿದ್ದರು' ಎಂದು ಇದೇ ವೇಳೆ ತಿಳಿಸಿದರು.

`ಮಧು ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲೇ ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾಲ ಮುಗಿಯುತ್ತಾ ಬಂದಿದೆ. ತಂದೆಯ ವಾರಸುದಾರನಾಗಿ, ಭವಿಷ್ಯದ ನಾಯಕನಾಗಿ ಮಧು ಬೆಳೆಯಬೇಕು. ರಾಜ್ಯ ಸುತ್ತಿ ಪಕ್ಷವನ್ನು ಸಂಘಟಿಸಬೇಕು. ಎಸ್.ಬಂಗಾರಪ್ಪ ಅವರಿಂದ ಪಕ್ಷಕ್ಕೆ ಆಗಿದ್ದ ನಷ್ಟವನ್ನು ನೀವು ತುಂಬಬೇಕು'

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ 

ತವರಿನಲ್ಲಿ ಸಂಭ್ರಮಾಚರಣೆ

ಹುಬ್ಬಳ್ಳಿಯಲ್ಲಿ ಅಧಿಕೃತವಾಗಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುತ್ತಿದ್ದಂತೆ ತವರು ಕ್ಷೇತ್ರ ಸೊರಬದಲ್ಲಿ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ- ಹಾಲು ಹಂಚಿ ಸಂಭ್ರಮಿಸಿದರು. ಸೊರಬ ಪುರಸಭೆ ಸದಸ್ಯ ಪ್ರಸನ್ನ ಕುಮಾರ್ ದೊಡ್ಮನೆ ನೇತೃತ್ವದಲ್ಲಿ ಸೊರಬದ ಶ್ರೀರಂಗನಾಥ ಹಾಗೂ ದುರ್ಗಮ್ಮ ದೇವಿಗೆ ವಿಶೇಷ‌ ಪೂಜೆ ಸಲ್ಲಿಸಿದರು.

ಬಳಿಕ ಸೊರಬದ ರಂಗನಾಥ ಬಡಾವಣೆ, ಆಟೋ ಸ್ಟ್ಯಾಂಡ್ ಹಾಗೂ ರಂಗನಾಥ ದೇವಾಲಯದ‌ ಮುಂದೆ ಮಧು ಅಭಿಮಾನಿಗಳು ಸಾರ್ವಜನಿಕರಿಗೆ ಹಾಲು ಸಿಹಿ ವಿತರಿಸಿದರು. ಈ ಸಂದರ್ಭ ಪುರಸಭಾ ಸದಸ್ಯರಾದ ಮೆಹಬೂಬ್ ಬಾಷಾ, ಸಿರಾಜುದ್ದೀನ್, ನಾಗರಾಜ್, ಶೋಭಾ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News