ಸ್ಥಿರ ಸರಕಾರ, ಸುಸ್ಥಿರ ಆಡಳಿತ ರಾಜ್ಯಕ್ಕೆ ಮರೀಚಿಕೆ: ಕಾಂಗ್ರೆಸ್ ಟೀಕೆ

Update: 2021-07-30 11:56 GMT

ಬೆಂಗಳೂರು, ಜು. 30: `ಎರಡು ವರ್ಷದಲ್ಲಿ ಸಿಡಿ ಸರಕಾರ ಒಂದೇ ಒಂದು ದಿನವೂ ರಾಜ್ಯದ ಸಮಸ್ಯೆಗಳತ್ತ ಗಮನ ಹರಿಸಲಿಲ್ಲ. ಅಧಿಕಾರಕ್ಕೆ ಏರಿದ ದಿನದಿಂದಲೂ ಸಂಪುಟ ಕಸರತ್ತು, ಆಂತರಿಕ ಕಿತ್ತಾಟ, ನಾಯಕತ್ವ ಬಡಿದಾಟ, ಸಿಡಿ ರಂಪಾಟದಲ್ಲಿಯೇ ಕಾಲ ಕಳೆಯಿತು, ಮುಂದೆಯೂ ಅದೇ ಮುಂದುವರೆಯಲಿದೆ. ನಿಮ್ಮ ಒಂದೇ ಒಂದು ಜನಪರ ಯೋಜನೆಯ ಹೆಸರು ಹೇಳಲು ಸಾಧ್ಯವೇ? ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ದಿಲ್ಲಿಯಲ್ಲಿರುವ ಪಕ್ಷನಿಷ್ಠನನ್ನು ಸಿಎಂ ಮಾಡಿಬಿಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಕೊಚ್ಚಿಕೊಳ್ಳುತ್ತಿದ್ದರು, ಆದರೆ ಸಿಎಂ ಆಗಿದ್ದು ಬಿಎಸ್‍ವೈ ನಿಷ್ಠ ಬಸವರಾಜ ಬೊಮ್ಮಾಯಿ ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್! ಈ ಹೊತ್ತಿನಲ್ಲಿ ಬಿಜೆಪಿ ವಿರುದ್ಧವೇ ಬಿಜೆಪಿ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಿ ಸ್ಥಿರ ಸರಕಾರ, ಸುಸ್ಥಿರ ಆಡಳಿತ ಎನ್ನುವುದು ರಾಜ್ಯಕ್ಕೆ ಮರೀಚಿಕೆಯಾಗಿದೆ' ಎಂದು ವಾಗ್ದಾಳಿ ನಡೆಸಿದೆ.

`ಉದಯ್ ಗಾಣಿಗಾ, ವಿನಾಯಕ್ ಬಾಳಿಗಾ ಕೊಲೆಗಳಿಗೆ ಯಾರು ಹೊಣೆಯೋ ಅವರೇ ಹೊಣೆ. ಹೆಣ ಬಿದ್ದರೆ ಹದ್ದುಗಳಂತೆ ಬರುತ್ತಿದ್ದ ತಾವು ಈಗ ನಿಮ್ಮದೇ ಪಕ್ಷದ ಕಾರ್ಯಕರ್ತ ಉದಯ್ ಗಾಣಿಗ ಹತ್ಯೆಗೆ ತಾವು ಧ್ವನಿ ಎತ್ತಲಿಲ್ಲವೇಕೆ? ಹೆಣಗಳನ್ನಿಟ್ಟುಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ನಿಮ್ಮ ವಿಕೃತಿಗೆ ಜನ ತಕ್ಕ ಪಾಠ ಕಲಿಸುವರು' ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

`ದೇಶ ಹಾಗೂ ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಲು ಹೇಡಿ ಮೋದಿ ಹಾಗೂ ಭ್ರಷ್ಟ ಬಿಎಸ್‍ವೈ ಹೊಣೆ ಅಲ್ಲದೆ ಬರಾಕ್ ಒಬಾಮಾ ಹೊಣೆಯೇ!? ಚಪ್ಪಾಳೆ ತಟ್ಟಿದ್ದು, ನಮಸ್ತೆ ಟ್ರಂಪ್ ಮಾಡಿದ್ದು, ಕುಂಭಮೇಳ ಮಾಡಿದ್ದು, ಚುನಾವಣಾ ಪ್ರಚಾರ ನಡೆಸಿದ್ದು, ಮುನ್ನೆಚ್ಚರಿಕೆ ಕಡೆಗಣಿಸಿ ಸಿಡಿ ರಂಪಾಟದಲ್ಲಿ ಮುಳುಗಿದ್ದು, ಇವಲ್ಲವೇ ನೀವು ಕೈಗೊಂಡ ಕ್ರಮಗಳು' ಎಂದು ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಟೀಕಿಸಿದೆ. 

`ಭಯೋತ್ಪಾದಕ ಗೋಡ್ಸೆ ಸಂತತಿಗಳಾದ ಬಿಜೆಪಿಗರಿಗೆ ಗಾಂಧಿವಾದ ಪಾಠ ಕೇಳುವ ಅರ್ಹತೆ ಇದೆಯೇ? ಕಷ್ಟದಲ್ಲಿರುವ ರಾಜ್ಯದ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಾ ರಾಜ್ಯವನ್ನ ನಿಮ್ಮ ರಾಜಕೀಯ ಪ್ರಯೋಗಶಾಲೆ ಮಾಡಿಕೊಂಡಿರುವುದಕ್ಕೆ ನಿಮಗೆ ಕೊಂಚವೂ ಲಜ್ಜೆ ಎಂಬುದೇ ಇಲ್ಲವಲ್ಲ ಬಿಜೆಪಿ ಸರಕಾರ 2 ವರ್ಷದಿಂದ ಒಂದು ದಿನವಾದರೂ ಜನರತ್ತ ಗಮನಿಸಿದ್ದೀರಾ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

`ಬಿಎಸ್‍ವೈ ನಂತರ ಬಿಜೆಪಿಯಲ್ಲಿ ಹಿರಿತನದ ಸ್ಥಾನದಲ್ಲಿರುವುದು ಕೆ.ಎಸ್.ಈಶ್ವರಪ್ಪ. ಪಾಪ ಸಿಎಂ ಆಗುವ ಕನಸಿನಲ್ಲಿದ್ದ ಈಶ್ವರಪ್ಪನವರು ಬಿಜೆಪಿಯಲ್ಲಿ ಈಗ ಸಚಿವ ಸ್ಥಾನಕ್ಕೂ ಬೇಡಿಕೊಳ್ಳುವ ಸ್ಥಿತಿ ಒದಗಿರುವುದು ವಿಷಾದನೀಯ! ಮೀರ್‍ಸಾದಿಕ್ 
ನಳಿನ್ ಕುಮಾರ್ ಕಟೀಲ್ ಸಂಘದ ಅಣತಿಯಂತೆ ಹಿಂದುಳಿದ ವರ್ಗದ ಈಶ್ವರಪ್ಪರನ್ನು ಹಿಂದೆಯೇ ಉಳಿಯುವಂತೆ ಮಾಡಿದ್ದಾರೆ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

`ಇದು ಡಬಲ್ ಇಂಜಿನ್ ಸರಕಾರವಲ್ಲ, ಡಬಲ್ ಹೈಕಮಾಂಡ್ ಸರಕಾರ. ದಿಲ್ಲಿಯಲ್ಲಿರುವುದು ಒಂದು ಹೈಕಮಾಂಡ್ ಆದರೆ, ದವಳಗಿರಿಯಲ್ಲಿರುವುದು ಮತ್ತೊಂದು! ಸಿಎಂ ಹೆಸರನ್ನ ಸೂಚಿಸುವುದಿಲ್ಲ ಎನ್ನುತ್ತಲೇ ದಿಲ್ಲಿ ಹೈಕಮಾಂಡ್‍ನ್ನ ಮಣಿಸಿದ ಬಿಎಸ್‍ವೈ ತಮಗೆ ಬೇಕಾದ ಸಂಪುಟ ರಚಿಸುತ್ತಾರೆ. ಒಟ್ಟಿನಲ್ಲಿ ಬಿಜೆಪಿ ವಿರುದ್ಧ ಬಿಜೆಪಿ ಕಿತ್ತಾಟ ನಿಲ್ಲದು, ಸ್ಥಿರ ಸರಕಾರ ಸಿಗದು'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News