ಮೇಕೆದಾಟು ಯೋಜನೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ಯಾರ ಪರವಿದ್ದಾರೆ: ಕುಮಾರಸ್ವಾಮಿ ಪ್ರಶ್ನೆ

Update: 2021-07-30 12:09 GMT

ಬೆಂಗಳೂರು, ಜು.30: ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರದಲ್ಲಿ ಕರ್ನಾಟಕದ ಪರವಾಗಿ ಇರುವವರು ಯಾರು? ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ ಎನ್‍ಡಿಎ ಸರಕಾರದ ಮೇಲೆ ಒತ್ತಡ ಹಾಕಿದೆ. ಆಡಳಿತ ಪಕ್ಷ ಡಿಎಂಕೆ ಕಾಂಗ್ರೆಸ್ ಮೇಲೆ ಒತ್ತಡ ಹಾಕಿದೆ. ಕರ್ನಾಟಕದಲ್ಲಿ ಮಾತ್ರ ಎರಡೂ ಪಕ್ಷಗಳು ಯೋಜನೆ ಜಾರಿಯಾಗಬೇಕು ಎನ್ನುತ್ತವೆ? ಯಾರು ಯಾರ ಪರ ಇದ್ದೀರಿ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮೇಕೆದಾಟು ಯೋಜನೆ ಜಾರಿಯಾಗದೆಂದು ಕೇಂದ್ರ ಜಲಸಂಪನ್ಮೂಲ ಸಚಿವರು ಭರವಸೆ ನೀಡಿರುವುದಾಗಿ ತಮಿಳುನಾಡಿನ ಆಡಳಿತ ಪಕ್ಷ, ವಿರೋಧ ಪಕ್ಷಗಳೆರಡೂ ನಿನ್ನೆಯಷ್ಟೇ ಪುನರುಚ್ಚರಿಸಿವೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ, ತಮಿಳುನಾಡು ಬಿಜೆಪಿ ಮುಖಂಡ, ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಮೇಕೆದಾಟು ಯೋಜನೆ ವಿರುದ್ಧ ಉಪವಾಸಕ್ಕೂ ಕೂರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೇಕೆದಾಟು ಅಣೆಕಟ್ಟು ಯೋಜನೆ ತಮಿಳುನಾಡಿನಲ್ಲಿ ರಾಜಕೀಯ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣವಾಗಿದ್ದರೆ, ಅದೇ ಮೇಕೆದಾಟು ಯೋಜನೆ ರಾಜ್ಯದಲ್ಲಿನ ಒಡಕುತನವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ‘ನಾವು ಯೋಜನೆ ಪರ ಇದ್ದೇವೆ’ ಎಂದು ರಾಜ್ಯದ ಮುಖ್ಯಮಂತ್ರಿಯೊಬ್ಬರೇ ಹೇಳಿದರೆ ಸಾಲದು. ಆಡಳಿತ ಪಕ್ಷ ಇದರ ಪರ ಇರುವುದಾಗಿ ಕೆಲಸದ ಮೂಲಕ ಸಾಬೀತು ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಅಣೆಕಟ್ಟು ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಅವರು ಕೇಂದ್ರ ಸರಕಾರದ ಅನುಮತಿ ಪಡೆಯಲಿಲ್ಲ. ಈಗ ಬೊಮ್ಮಾಯಿ ಅವರೂ ಯೋಜನೆ ಜಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇವೆಲ್ಲ ಮಾತಿನಲ್ಲೇ ಉಳಿಯಬಾರದು. ಕೇಂದ್ರದ ಬಳಿಗೆ ಹೋಗಿ ಅನುಮತಿ ಪಡೆಯಲು ಪ್ರಯತ್ನಿಸಬೇಕು. ಈ ಕಾರ್ಯವನ್ನು ಜೆಡಿಎಸ್ ಯಾವಾಗಲೂ ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮೇಕೆದಾಟು, ಕೃಷ್ಣಾ, ಮಹಾದಾಯಿ ಯೋಜನೆಗಳಿಗೆ ಅನುಮತಿ ನೀಡಲು ಆಗ್ರಹಿಸಿ ಜೆಡಿಎಸ್ ರಾಜ್ಯಪಾಲರ ಮೂಲಕ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಸಲ್ಲಿಸಿದೆ. ಈ ವಿಚಾರವಾಗಿ ಪ್ರಧಾನಿಯನ್ನೂ ಭೇಟಿಯಾಗಲು ನಿರ್ಧರಿಸಿದ್ದೇವೆ. ರಾಜ್ಯವನ್ನು ಆಳುತ್ತಿರುವ ಬಿಜೆಪಿಗೆ ಈ ಯೋಜನೆಗಳ ವಿಚಾರದಲ್ಲಿ ಬದ್ಧತೆ ಇದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಿ ಅನುಮತಿ ತರಲಿ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News