ನಾನು ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದು ಯಡಿಯೂರಪ್ಪ: ಶಾಸಕ ಯತ್ನಾಳ್ ಆರೋಪ

Update: 2021-07-30 12:54 GMT

ಬೆಂಗಳೂರು, ಜು. 30: `ನನಗೆ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಅದನ್ನು ಯಡಿಯೂರಪ್ಪ ತಪ್ಪಿಸಿದರು. ಯತ್ನಾಳ್ ಅವರನ್ನು ಸಿಎಂ ಮಾಡಿದರೆ ಮೂರು ತಿಂಗಳಲ್ಲೇ ಸರಕಾರ ಕೆಡವುತ್ತೇನೆಂದು ಕೇಂದ್ರದ ನಾಯಕರಿಗೆ ಬಿಎಸ್‍ವೈ ಬೆದರಿಕೆ ಹಾಕಿದ್ದರು' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೊಸ ಆರೋಪ ಮಾಡಿದ್ದಾರೆ.

ಶುಕ್ರವಾರ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನನಗೆ ಇದ್ದ ಸಿಎಂ ಆಗುವ ಅವಕಾಶ ತಪ್ಪಿಸಿದರೂ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ. ಈ ಹಿಂದೆ ನಾನೇನೂ ದಿಲ್ಲಿಯಲ್ಲಿ ಲಾಬಿ ಮಾಡಿ ಕೇಂದ್ರದಲ್ಲಿ ಸಚಿವ ಆಗಿರಲಿಲ್ಲ. ಮೋದಿ ಪ್ರಾಮಾಣಿಕರು, ದೇಶಕ್ಕಾಗಿ ಪರಿವರ್ತನೆ ಯಜ್ಞ ಮಾಡುತ್ತಿದ್ದಾರೆ. ಲಾಬಿ ಮಾಡಿ ಮಂತ್ರಿ ಆಗುವಂತಹ ಕೆಳಮಟ್ಟದ ರಾಜಕಾರಣಿ ನಾನು ಅಲ್ಲ' ಎಂದು ಗುಡುಗಿದರು.

`ಯಡಿಯೂರಪ್ಪ ಒಬ್ಬರೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿಲ್ಲ. ಪಕ್ಷದ ಎಲ್ಲ ಶಾಸಕರು ಇದ್ದೇವೆ' ಎಂದ ಬಸನಗೌಡ ಪಾಟೀಲ್ ಯತ್ನಾಳ್, `ಯತ್ನಾಳ್ ಸಿಎಂ ಆದರೆ ಇವರೆಲ್ಲಾ ಜೈಲಿಗೆ ಹೋಗ್ತಾರೆಂಬ ಭಯವಿದೆ. 10 ಸಾವಿರ ಕೋಟಿ ರೂ. ಭ್ರಷ್ಟಾಚಾರವನ್ನು ಮಾಜಿ ಸಿಎಂ ಯಡಿಯೂರಪ್ಪ ಮಾಡಿದ್ದಾರೆ. ಬಿಎಸ್‍ವೈ ತಾವೇ ಶಿಕಾರಿಪುರದ ಸಿಎಂ ಎಂಬಂತೆ ಆ ಭಾಗಕ್ಕೆ ಹೆಚ್ಚಿನ ಅನುದಾನ ತೆಗೆದುಕೊಂಡು ಹೋಗಿದ್ದಾರೆ' ಎಂದು ವಾಗ್ದಾಳಿ ನಡೆಸಿದರು. 

`ಇದೀಗ ಜಿಲ್ಲೆಗಳ ಪ್ರವಾಸಕ್ಕೆ ತೆರಳುತ್ತೇನೆಂದು ಬಿಎಸ್‍ವೈ ಹೇಳುತ್ತಿದ್ದಾರೆ. ಯಡಿಯೂರಪ್ಪ ವಿಜಯಪುರ ಜಿಲ್ಲೆಗೆ ಬರಲಿ ನಾನೇ ಈ ಕುರಿತು ಪ್ರಶ್ನೆ ಮಾಡುತ್ತೇನೆ. ನನ್ನ ಬಗ್ಗೆ ಯಡಿಯೂರಪ್ಪ ಅವರಿಗೆ ಭಯ ಇದೆ. ಅದಕ್ಕೇ ನನಗೆ ಸಿಎಂ ಸ್ಥಾನ ತಪ್ಪಿಸಿದರು' ಎಂದು ದೂರಿದ ಯತ್ನಾಳ್, `ಗೌರವಯುತವಾಗಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನವನ್ನು ನೀಡಬೇಕು' ಎಂದು ಇದೇ ಸಂದರ್ಭದಲ್ಲಿ ಆಗ್ರಹಪಡಿಸಿದರು. 

`ನೂತನ ಸಿಎಂ ಅವರು ಒಂದೆ ವೇಳೆ ಯಡಿಯೂರಪ್ಪ ಅವರ ನೆರಳಿನಂತೆ ಮುಂದುವರಿದರೆ, ಕರ್ನಾಟಕದಲ್ಲಿ ಆ ನೆರಳನ್ನು ನಾಶ ಮಾಡುವ ಕೆಲಸ ನಾನು ಮಾಡುತ್ತೇನೆ ಎಂದ ಟೀಕಿಸಿದ ಯತ್ನಾಳ್, `ಸ್ವಾಭಿಮಾನ, ನೈತಿಕತೆ ಎಂದರೆ ಏನು ನನಗೆ ಗೊತ್ತಿಲ್ಲ. ಸ್ವಾಭಿಮಾನ, ನೈತಿಕತೆ, ಪ್ರಾಮಾಣಿಕತೆ ರಾಜಕಾರಣದಲ್ಲಿ ಉಳಿದಿದೆಯಾ. ನೈತಿಕತೆ, ಭ್ರಷ್ಟಾಚಾರ, ಸ್ವಾಭಿಮಾನವನ್ನ ಡಿಕ್ಷನರಿಯಲ್ಲಿ ಹುಡಕಬೇಕಾಯ್ತು' ಎಂದು ಸಂಪುಟ ಸೇರಲಾರೆ ಎಂಬ ಶೆಟ್ಟರ್ ಹೇಳಿಕೆಗೆ ಕುಟುಕಿದರು.

`ಐಪಿಎಸ್ ಅಧಿಕಾರಿ 27ರಿಂದ 28 ವಯಸ್ಸಿನವರು ಇರುತ್ತಾರೆ. ಪಿಎಸ್ಸೈ 50 ವರ್ಷದವರು ಇರುತ್ತಾರೆ. ಹುದ್ದೆಗೆ ಇರೋದು ಮಹತ್ವ, ವಯಸ್ಸಿಗಲ್ಲ. ಇಂತಹ ಕಾರಣಗಳನ್ನ ಹೇಳಬಾರದು. ಮುಖ್ಯಮಂತ್ರಿ, ಮುಖ್ಯಮಂತ್ರಿನೇ. 25 ಅಥವಾ 105 ವರ್ಷವಾದರೂ ಮುಖ್ಯಮಂತ್ರಿನೇ, ಒಂದು ಹುದ್ದೆಗೆ ಹೋದ ಮೇಲೆ ಕೆಳಗಿನ ಹುದ್ದೆಗೆ ಬರಬಾರದು' ಎಂದು ಯತ್ನಾಳ್, ಜಗದೀಶ್ ಶೆಟ್ಟರ್ ವಿರುದ್ಧ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News