ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪಕ್ಷವನ್ನು ಗೆಲ್ಲಿಸುವ ಗುರಿ ನನ್ನದು: ಡಿ.ಕೆ.ಶಿವಕುಮಾರ್

Update: 2021-07-30 13:14 GMT

ಹುಬ್ಬಳ್ಳಿ, ಜು. 30: `ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 120 ಅಥವಾ 130 ಸ್ಥಾನಗಳನ್ನು ಗೆಲ್ಲುವುದು ನನ್ನ ಗುರಿ ಅಲ್ಲ, ಬದಲಿಗೆ ನನ್ನ ಗುರಿ 224 ಕ್ಷೇತ್ರದಲ್ಲಿಯೂ ಪಕ್ಷವನ್ನು ಗೆಲ್ಲಿಸುವುದಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಘೋಷಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪಕ್ಷವನ್ನು ಗೆಲ್ಲಿಸುವೆ ಎಂದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಸಮ್ಮುಖದಲ್ಲಿ ಪ್ರಕಟಿಸುತ್ತಿದ್ದು, ನಿಮ್ಮೆಲ್ಲರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ' ಎಂದು ಇದೇ ವೇಳೆ ಪ್ರಕಟಿಸಿದರು. 

`ನದಿ ನೀರು ಸಮುದ್ರ ಸೇರುವ ಹಾಗೇ, ಮಧು ಬಂಗಾರಪ್ಪ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಮಧು ಬಂಗಾರಪ್ಪ ಅವರ ಜತೆ ನೂರಾರು ಜನ ಕಾರ್ಯಕರ್ತರು ಪಕ್ಷ ಸೇರುತ್ತಿದ್ದೀರಿ. ಹೊಸಬರು ಹಳಬರು ಎಂಬ ವ್ಯತ್ಯಾಸ ಇಲ್ಲ. ಇಲ್ಲಿ ಪಕ್ಷದ ಬಾವುಟ ಹಿಡಿದ ಮೇಲೆ ಎಲ್ಲರೂ ಒಂದೇ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುತ್ತದೆ. ಎಲ್ಲರೂ ಪಕ್ಷಕ್ಕೆ ಶಕ್ತಿಯಾಗಬೇಕು. ಇಡೀ ರಾಜ್ಯದುದ್ದಗಲಕ್ಕೆ ಪಕ್ಷದ ಸಿದ್ಧಾಂತ, ತತ್ವ, ನಾಯಕತ್ವವನ್ನು ಒಪ್ಪಿ ಬರುವವರಿಗೆ ಸ್ವಾಗತ' ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು. 

`ನಾನು ಮೊನ್ನೆ ಯುವ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದಾಗ ಹೇಳಿದ್ದೆ. ನಿನ್ನೆ ಆಗಿದ್ದೆಲ್ಲ ಇತಿಹಾಸ, ನಾಳೆ ಬರುವುದು ಭವಿಷ್ಯ. ಆದರೆ, ಈ ದಿನ ನಿಮ್ಮದು. ಅದನ್ನು ನೀವು ಬಳಸಿಕೊಳ್ಳುವುದು ಮುಖ್ಯ. ರಾಜಕಾರಣದಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ನಿತ್ಯ ಏನು ಸೇವೆ ಸಲ್ಲಿಸುತ್ತಿದ್ದೇವೆ. ಎಷ್ಟು ಜನರನ್ನು ಸೇರಿಸುತ್ತಿದ್ದೇವೆ. ಎಷ್ಟು ಬಲ ತುಂಬುತ್ತಿದ್ದೇವೆ ಎಂಬುದು ಮುಖ್ಯವಾದ ವಿಚಾರ' ಎಂದು ಶಿವಕುಮಾರ್ ನುಡಿದರು.

`ಇಂದು ಪಕ್ಷಕ್ಕೆ ನೂರಾರು ಜನ ಸೇರುತ್ತಿದ್ದಾರೆ. ನಾವು ಮಧು ಅವರನ್ನು ಪಕ್ಷದ ಕಚೇರಿಯಲ್ಲೇ ಸೇರಿಸಿಕೊಳ್ಳಬಹುದಿತ್ತು. ನಾವು ಅವರನ್ನು ವ್ಯಕ್ತಿಯಾಗಿ ಸೇರಿಸಿಕೊಳ್ಳುತ್ತಿಲ್ಲ. ಅವರನ್ನು ಪಕ್ಷಕ್ಕೆ ಶಕ್ತಿಯಾಗಿ ಸೇರಿಸಿಕೊಳ್ಳುತ್ತಿದ್ದೇವೆ. ನನ್ನ ರಾಜಕಾರಣದ ಆರಂಭಿಕ ದಿನಗಳಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿ ಆದರು. ನಂತರ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಆಗ ನಾನು ಹಾಗೂ ಬೆಳ್ಳಿಯಪ್ಪ ಅವರು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ನಾವಿಬ್ಬರು ಏನು ಮಾಡಬೇಕೆಂದು ಕೇಳಿದ್ದೆವು.

ಆಗ ಅವರು ನೀನು ನನ್ನ ಜತೆ ಬರಬೇಡ, ಎಸ್.ಎಂ.ಕೃಷ್ಣ ಅವರ ಜತೆ ಕಾಂಗ್ರೆಸ್ ಪಕ್ಷದಲ್ಲಿರು ಎಂದರು. ಅವರು ನನ್ನ ಜತೆ ಬಾ ಎಂದಿದ್ದರೆ ನಾನು ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ಎಂದು ಗೊತ್ತಿಲ್ಲ. ಇಂತಹ ಅನೇಕ ಘಟನೆಗಳು ನನ್ನ ಕಣ್ಣ ಮುಂದೆ ಬರುತ್ತಿವೆ. ಅವರ ಸುಪುತ್ರ ಪಕ್ಷ ಬಿಟ್ಟಾಗ, ಬೇರೆ ಪಕ್ಷ ಸೇರಿಕೊಂಡಾಗ ಮನಸ್ಸಿಗೆ ಬಹಳ ನೋವಾಗಿತ್ತು' ಎಂದು ಶಿವಕುಮಾರ್ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News