ಮೈಸೂರು: ಬೇವಿನ ಸೊಪ್ಪು ಕೀಳಲು ಹೋದ ಬಾಲಕನನ್ನು ಗೇಟಿಗೆ ಕಟ್ಟಿ ಹಾಕಿ ಥಳಿಸಿದ ಪೊಲೀಸ್ ಅಧಿಕಾರಿ; ವೀಡಿಯೊ ವೈರಲ್

Update: 2021-07-30 15:27 GMT

ಮೈಸೂರು,ಜು.30: ದೇವರ ಪೂಜೆಗಾಗಿ ಬೇವಿನ ಸೊಪ್ಪು ಕೀಳಲು ಹೋಗಿದ್ದ ಬಾಲಕನೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ಗೇಟಿಗೆ ಕಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಮೈಸೂರು ನಗರದ ಗಾಯಿತ್ರಿಪುರಂನ ಪೊಲೀಸ್ ಕ್ವಾಟ್ರಸ್ ನಲ್ಲಿ ನಡೆದಿದೆ.

ಪೊಲೀಸ್ ಸಿಬ್ಬಂದಿ ಮನೆಯ ಪಕ್ಕದ ಖಾಲಿ ಜಾಗದಲ್ಲಿದ್ದ ಬೇವಿನ ಮರದಿಂದ ಸೊಪ್ಪು ಕೀಳುವುದಕ್ಕಾಗಿ ಬಾಲಕ ಹೋಗಿದ್ದ. ಈ ವೇಳೆ ಪೊಲೀಸ್ ಅಧಿಕಾರಿ ಬಾಲಕನನ್ನು ಹಿಡಿದು ತನ್ನ ಮನೆಯ ಗೇಟಿಗೆ ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಅಧಿಕಾರಿ ಬಾಲಕನನ್ನು ಕಟ್ಟಿ ಹಾಕಿರುವುದು ಮತ್ತು ಹಲ್ಲೆ ನಡೆಸುತ್ತಿರುವುದನ್ನು ಗಮನಿಸಿದ ಕಾಲೇಜು ವಿದ್ಯಾರ್ಥಿನಿಯೋರ್ವರು ವೀಡಿಯೋ ಮಾಡಿದ್ದಾರೆನ್ನಲಾಗಿದೆ. ಈ ವೇಳೆ ಮೈಸೂರು ಜಿಲ್ಲಾ ಮಾನವ ಹಕ್ಕುಗಳ  ಹೋರಾಟಗಾರ ತನ್ವೀರ್ ಪಾಷ ಅವರು ಕೂಡ ಸ್ಥಳಕ್ಕೆ ಆಗಮಿಸಿ ಘಟನೆ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು:

ಈ ಸಂಬಂಧ ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗದ ಮುಖ್ಯ ನ್ಯಾಯಾಧೀಶ ಆಂಟೋನಿ ಸೆಬಾಸ್ಟಿನ್‍ ಗೆ ದೂರು ಸಲ್ಲಿಕೆ ಮಾಡಲಾಗಿದ್ದು, ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ರಾಜ್ಯ ಮಕ್ಕಳ ಹಕ್ಕುಗಳ  ರಕ್ಷಣಾ ಆಯೋಗ, ಪೊಲೀಸ್ ಸಿಬ್ಬಂದಿ ಹಾಗೂ ಬಾಲಕನ ಪೋಷಕರ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಬಾಲಕನನ್ನು ಗೇಟಿಗೆ ಕಟ್ಟಿ ಪೊಲೀಸ್ ಅಧಿಕಾರಿಯೊಬ್ಬರು ಅಮಾನೀಯವಾಗಿ ವರ್ತಿಸಿರುವ ಘಟನೆ ನಮ್ಮ ಗಮನಕ್ಕೆ ಬಂದಿದ್ದು, ಈ ಸಂಬಂಧ ವರಧಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ.
- ಧನಂಜಯ್ಯ ಎಲಿಯೂರು,

- ಮಕ್ಕಳ ಕಲ್ಯಾಣ ಸಮಿತಿ ಸದಸ್ಯ.


ಘಟನೆ ನಮ್ಮ ಗಮನಕ್ಕೆ ಬಂದಿಲ್ಲ,  ಈ ಸಂಬಂಧ ಮಾಹಿತಿ ಪಡೆದು ವಿಚಾರಣೆ ಮಾಡಲಾಗುವುದು.
-ಪ್ರದೀಪ್ ಗಂಠಿ.
ಡಿಸಿಪಿ, ಮೈಸೂರು ನಗರ.


 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News