ಮಾಜಿ ಶಾಸಕ ಬೋಸರಾಜ್ ವಿರುದ್ಧ ಉದ್ಯಾನವನದ ಜಾಗ ಕಬಳಿಕೆ ಆರೋಪ

Update: 2021-07-30 16:21 GMT

ರಾಯಚೂರು, ಜು.30: ಸಿಪಿಐ(ಎಂಎಲ್) ತಾಲೂಕು ಸಮಿತಿ ಮತ್ತು ಸಾರ್ವಜನಿಕ ಉದ್ಯಾನವನ ಉಳಿಸಿ ಹೋರಾಟ ಸಮಿತಿ ಜಂಟಿಯಾಗಿ ಜು.26ರಿಂದ ಪಟ್ಟಣದ ಶಾಸಕರ ಭವನದ ಮುಂಭಾಗ ಸಾರ್ವಜನಿಕ ಉದ್ಯಾನವನ ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್ ಕಟ್ಟಡ ಕಟ್ಟುತ್ತಿರುವ ಮಾನ್ವಿಯ ಮಾಜಿ ಶಾಸಕ ಎನ್.ಎಸ್.ಬೋಸರಾಜ ಹಾಗೂ ಅವರಿಗೆ ಸಹಕರಿಸುತ್ತಿರುವ ಪುರಸಭೆಯ ಮುಖ್ಯಾಧಿಕಾರಿ ಜಗದೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಹೋರಾಟವು ಇಂದು 5ನೇ ದಿನಕ್ಕೆ ಕಾಲಿರಿಸಿದೆ.

ಮಾನ್ವಿ ಪಟ್ಟಣದ ಸರ್ವೇ ನಂಬರ್ 467/ಅ ರಲ್ಲಿ 6 ಎಕರೆ 30 ಗುಂಟೆ ಜಾಗದಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಕಾಲನಿಯಲ್ಲಿ ಮೀಸಲಿಟ್ಟ ಸಾರ್ವಜನಿಕ ಉದ್ಯಾನವನ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್ ಮತ್ತು ಮನೆ ಕಟ್ಟಲು ಮುಂದಾಗಿರುವುದನ್ನು ತಕ್ಷಣ ತಡೆಯುವಂತೆ ಜು.14ರಂದು ಪುರಸಭೆಯ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕ ಉದ್ಯಾನವನ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಕೆ.ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

ನಗರದ ರಿಪೋಟರ್ಸ್ ಗಿಲ್ಡ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾನ್ವಿಯ ತಹಶೀಲ್ದಾರರಿಗೆ ಜು.20ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಪತ್ರ ಸಲ್ಲಿಸಲಾಗಿದೆ. ಇವರಿಬ್ಬರೂ ನಿರ್ಲಕ್ಷ್ಯ ವಹಿಸಿದ ಕಾರಣ ಅನಿವಾರ್ಯವಾಗಿ ನಾವು ಜು.26ರಿಂದ ಅನಿರ್ದಿಷ್ಟಾವಧಿ ಧರಣಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

1964ರಲ್ಲಿ ಸರಕಾರವೇ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ಕಾಲನಿಯಯನ್ನು ನಿರ್ಮಾಣ ಮಾಡಿದ್ದು, ಕಾಲನಿಯ ಮೂಲ ನಕಾಶೆಯಲ್ಲಿ 3112 ಚ.ಮೀ. ಅಂದರೆ 33,425 ಚದರ ಅಡಿ ಸ್ಥಳವನ್ನು ಸಾರ್ವಜನಿಕ ಉದ್ಯಾನವನಕ್ಕೆ ಎಂದು ಮೀಸಲಿಡಲಾಗಿದೆ. ಈ ಉದ್ಯಾನವನದ ಮೀಸಲು ಸ್ಥಳವನ್ನು ಅತಿಕ್ರಮಣ ಮಾಡಲು ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಎನ್.ಎಸ್.ಬೋಸರಾಜ್ ಮುಂದಾಗಿದ್ದಾರೆ. ಇದನ್ನು ರಕ್ಷಣೆ ಮಾಡಬೇಕಾದ ಪುರಸಭೆಯು ಅವರಿಗೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಮೂಲಕ ನೇರವಾಗಿ ಸಾರ್ವಜನಿಕ ಉದ್ಯಾನವನ ಅತಿಕ್ರಮಣಕ್ಕೆ ಸಹಕಾರ ನೀಡಿದ್ದಾರೆ ಎಂದು ಅವರು ದೂರಿದರು.

ಈ ಹಿಂದೆ ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಅದನ್ನು ದಿಕ್ಕರಿಸಿ ಕೋಟ್ಯಂತರ ಬೆಲೆ ಬಾಳುವ ಸಾರ್ವಜನಿಕ ಆಸ್ತಿಯನ್ನು ಕಬಳಿಕೆ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಜಾಗದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಬೋಸರಾಜರವರು ತಮ್ಮ ಅಧಿಕಾರ ಬಲದಿಂದ, ಹಣ ಬಲದಿಂದ, ದೌರ್ಜನ್ಯದಿಂದ ಸರಕಾರದ ಸಾರ್ವಜನಿಕರ ಆಸ್ತಿಯನ್ನು ಕಬಳಿಕೆ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಅವರು ಹೇಳಿದರು.

ಸಾರ್ವಜನಿಕ, ಸರಕಾರಿ ಉದ್ಯಾನವನಕ್ಕೆ ಮೀಸಲಿಟ್ಟ ಸ್ಥಳವನ್ನು ಕಬಳಿಸಿದ ಬೋಸರಾಜರವರ ವಿರುದ್ಧ, ಭೂ ಕಬಳಿಕೆಗೆ ಸಹಕಾರ ನೀಡಿದ ಜಗದೀಶ್ ರವರ ವಿರುದ್ಧ ಮತ್ತು ಭೂ ಕಬಳಿಕೆ ಬಗ್ಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ ತಹಶೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸರಕಾರದ ಮತ್ತು ಸಾರ್ವಜನಿಕರ ಆಸ್ತಿಯನ್ನು ರಕ್ಷಣೆ ಮಾಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ನಾಗಲಿಂಗಸ್ವಾಮಿ ಹೇಳಿದರು.

ನಮ್ಮ ಈ ಉದ್ಯಾನವನ ಉಳಿಸುವ ಹೋರಾಟವು ನ್ಯಾಯಯುತವಾಗಿದ್ದು, ನಮ್ಮ ಬೇಡಿಕೆ ಈಡೇರಿಸುವವರೆಗೂ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಎಂದು ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಿಪಿಐ(ಎಂಎಲ್) ತಾಲೂಕು ಸಮಿತಿಯ ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಪ್ರಕಾಶ ತಡಕಲ್, ಹುಚ್ಚಪ್ಪ ಊರಲಗಡ್ಡಿ, ಬುಜ್ಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News