ಪ್ರವಾಹ ಇಳಿಕೆ: ನಿಟ್ಟುಸಿರು ಬಿಟ್ಟ ಸಂತ್ರಸ್ತರು
ಬಾಗಲಕೋಟೆ, ಜು. 30: ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಸುರಿಯುತ್ತಿದ್ದ ಮಳೆ ಕೊಂಚ ಬಿಡುವು ನೀಡಿದ್ದು, ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರು ನಿಟ್ಟುಸಿರುಬಿಟ್ಟಿದ್ದಾರೆ.
ಶುಕ್ರವಾರ ಸುಮಾರು 70 ಸಾವಿರ ಕ್ಯೂಸೆಕ್ಸ್‍ನಷ್ಟು ನೀರು ಕಡಿಮೆಯಾಗಿರುವುದು ಈ ಭಾಗದ ಜನರಿಗೆ ಹಾಗೂ ರೈತರಿಗೆ ನಿರಾಳತೆ ಮೂಡಿಸಿದೆ. ಪ್ರತಿ ವರ್ಷ ಕೃಷ್ಣಾ ನದಿ ತುಂಬಿ ಹರಿದು ಹಿನ್ನೀರಿನಿಂದ ಸಂಕಷ್ಟಕ್ಕೆ ಒಳಗಾಗುವ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಮೊದಲೇ ಕೋವಿಡ್‍ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಪ್ರವಾಹ ಮತ್ತಷ್ಟು ಕಷ್ಟಕ್ಕೆ ದೂಡಿದೆ.
ಹೀಗಾಗಿ ರಾಜ್ಯ ಸರಕಾರ ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಈ ಭಾಗದ ಜನರ ಹಾಗೂ ರೈತರ ಅಭಿಪ್ರಾಯವಾಗಿದೆ. ಪ್ರತಿ ವರ್ಷ ಹಿನ್ನಿರಿನ ಸಂಕಷ್ಟದಿಂದ ನೊಂದಿರುವ ಜನರು ಶಾಶ್ವತ ಪರಿಹಾರವೊಂದೆ ಇದಕ್ಕೆ ಮಾರ್ಗ ಎಂದು ಜನರ ಅನಿಸಿಕೆಯಾಗಿದೆ.