ನನ್ನನ್ನು ಯಾರೊಬ್ಬರೂ ಬ್ಲ್ಯಾಕ್‍ಮೇಲ್ ಮಾಡಲು ಸಾಧ್ಯವಿಲ್ಲ: ಶಾಸಕ ರೇಣುಕಾಚಾರ್ಯ
ಬೆಂಗಳೂರು, ಜು. 30: `ಸಚಿವ ಸ್ಥಾನಕ್ಕಾಗಿ ನಾನು ದಿಲ್ಲಿಗೆ ಹೋಗಿ ಲಾಬಿ ಮಾಡುವ ಜಾಯಮಾನದವನಲ್ಲ. ಅದೃಷ್ಟ ಯಾರಿಗೆ ಇರುತ್ತದೆಯೋ ಅವರಿಗೆ ಒಳ್ಳೆಯ ಸ್ಥಾನ ಎಂದಿದ್ದರೂ ಸಿಕ್ಕೇ ಸಿಗುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡುವ ವ್ಯಕ್ತಿ ಖಂಡಿತ ಅಲ್ಲ. ಯಾವುದೇ ಕಾರಣಕ್ಕೂ ದಿಲ್ಲಿಗೂ ಹೋಗುವುದಿಲ್ಲ. ಈಗಲೇ ಕ್ಷೇತ್ರಕ್ಕೆ ತೆರಳಿ ಕೆಲಸ ಮಾಡುತ್ತೇನೆ. ನನಗೆ ಲಾಬಿ ಮಾಡಿ ಸಚಿವನಾಗುವುದು ಇಷ್ಟವಿಲ್ಲ' ಎಂದು ಸ್ಪಷ್ಟಪಡಿಸಿದರು.
`ನನ್ನನ್ನು ಈ ಎತ್ತರಕ್ಕೆ ಬೆಳೆಸಿದವರು ಹೊನ್ನಾಳಿ-ನ್ಯಾಮತಿ ಮತ ಕ್ಷೇತ್ರದವರು. ಅವರ ಸೇವೆ ಮಾಡುವುದೇ ನನಗೆ ಪೂರ್ವ ಜನ್ಮದ ಪುಣ್ಯ. ನಾಳೆಯೇ ನನ್ನ ಮತ ಕ್ಷೇತ್ರಕ್ಕೆ ಹೋಗಿ ಎಂದಿನಂತೆ ನನ್ನ ಕೆಲಸ ಕಾರ್ಯದಲ್ಲಿ ತೊಡಗುತ್ತೇನೆ. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದು ಸಿಎಂ ಪರಮಾಧಿಕಾರ. ಕೇಂದ್ರ ವರಿಷ್ಠರ ಜೊತೆ ಚರ್ಚಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಅವರಿಗೆ ರಾಜಕೀಯ ಪ್ರಬುದ್ಧತೆ ಇದೆ' ಎಂದು ರೇಣುಕಾಚಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
`ಸಂಪುಟ ವಿಸ್ತರಣೆಯಲ್ಲಿ ನಾವು ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಮ್ಮ ನಾಯಕ ಬಿಎಸ್‍ವೈ ಅವರು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೂ, ಕೆಲವರು ಅವರ ಹೆಸರು ಹೇಳಿಕೊಂಡು ಮಾತನಾಡುತ್ತಾರೆ' ಎಂದು ಟೀಕಿಸಿದ ಅವರು, `ಯಾರಿಗೂ ನಾನು ಇಂಥವರನ್ನೇ ಸಚಿವ ಮಾಡಿ ಎಂದು ಶಿಫಾರಸು ಮಾಡುವುದಿಲ್ಲ. ಅದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲವರು ಅವರ ಹೆಸರು ಹೇಳಿ ರಾಜಕೀಯ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡಿನ ಜನರಿಗೆ ಅಪಮಾನ: `ಯಾವುದೇ ಮನೆಗಳಿಗೆ ಮಠಾಧೀಶರು ಹೋದರೆ ಗೌರವದ ಕಾಣಿಕೆ ನೀಡುವುದು ಸಂಪ್ರದಾಯ. ಮೊನ್ನೆ ಯಡಿಯೂರಪ್ಪ ಮನೆಯಲ್ಲೂ ಹಾಗೆ ಕಾಣಿಕೆ ಕೊಟ್ಟಿದ್ದಾರೆ. ಮಠಾಧೀಶರಿಗೆ ನೀಡಿರುವುದು ಅದು ಅಲ್ಪ ಪ್ರಮಾಣದ ಕಾಣಿಕೆ, ಲಕ್ಷಾಂತರ ರೂಪಾಯಿ ಏನೂ ಕೊಟ್ಟಿಲ್ಲ. ಅದನ್ನು ಈ ರೀತಿ ಅಪಮಾನ ಮಾಡಬಾರದು. ಅಪಮಾನ ಮಾಡಿದವರು ಬೇಷರತ್ ಕ್ಷಮೆ ಕೇಳಬೇಕು. ಬಿಎಸ್‍ವೈಗೆ ಮಾಡಿದ ಅಪಮಾನ ನಾಡಿನ ಜನರಿಗೆ ಮಾಡಿದ ಅಪಮಾನ' ಎಂದು ಟೀಕಿಸಿದರು.
ಎಲ್ಲಿ ಹಿಂದುತ್ವ?: `ಯಡಿಯೂರಪ್ಪನವರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕರು. ಈಗ ಹಿಂದುತ್ವದ ಬಗ್ಗೆ ಮಾತನಾಡುವ ಯತ್ನಾಳ್ ಜೆಡಿಎಸ್‍ಗೆ ಹೋದಾಗ ಎಲ್ಲಿ ಹೋಗಿತ್ತು ಅವರ ಹಿಂದುತ್ವ. ಇದೀಗ ಇವರಿಗೆ ಜ್ಞಾನೋದಯ ಆಗಿರಬೇಕು. ಯಡಿಯೂರಪ್ಪನವರು ಬಿಜೆಪಿ ಕಟ್ಟಿ ಬೆಳೆಸಿದವರು. ಅವರಂತೆ ಪಕ್ಷಾಂತರಿಯಲ್ಲ' ಎಂದು ರೇಣುಕಾಚಾರ್ಯ ಇದೇ ವೇಳೆ ವಾಗ್ದಾಳೀ ನಡೆಸಿದರು.
`ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಯಡಿಯೂರಪ್ಪ ಸುತ್ತದ ಹಳ್ಳಿ ಇಲ್ಲ. ಪಾದಯಾತ್ರೆ ಮಾಡಿ ಪಕ್ಷ ಬಲಪಡಿಸಿದ್ದಾರೆ. ಹೊನ್ನಾಳಿಗೆ ಬೈಕ್ ಹಾಗೂ ಸೈಕಲ್‍ನಲ್ಲಿ ಪ್ರವಾಸ ಮಾಡಿದ್ದಾರೆ. ಬಿಎಸ್‍ವೈ ನಾಯಕತ್ವದಲ್ಲಿ ಹಲವಾರು ಶಾಸಕರಿದ್ದಾರೆ. ರಾಷ್ಟ್ರೀಯ ನಾಯಕರ ಮಾತಿಗೆ ಬೆಲೆ ಕೊಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ತೀರ್ಮಾನಕ್ಕೆ ಎಲ್ಲರು ಒಪ್ಪಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಬಗ್ಗೆ ಮಾತನಾಡುವವರು ಆತ್ಮಾವಲೋಕನ ಮಾಡಿಕೊಳ್ಳಲಿ' ಎಂದು ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿದರು.
ನನ್ನ ವಿರುದ್ಧ ಷಡ್ಯಂತ್ರ: `ಕೆಲವರು ನನ್ನ ವಿರುದ್ಧ ರಾಜಕೀಯ ದುರುದ್ದೇಶದಿಂದ ಷಡ್ಯಂತ್ರ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮಹಾನುಭಾವರೊಬ್ಬರು ಮಾಧ್ಯಮದ ಮಿತ್ರರ ಜೊತೆ ಏನು ಹೇಳಿದ್ದಾರೆಂದು ನೆನಪು ಮಾಡಿಕೊಳ್ಳಲಿ' ಎಂದು ಸಲಹೆ ನೀಡಿದ ರೇಣುಕಾಚಾರ್ಯ, `ನಾನು ಯಾವುದೇ ತಪ್ಪು ಮಾಡಿಲ್ಲ. ಜೀವನದಲ್ಲಿ ಎಲ್ಲರೂ ಎಡವುವುದು ಸಹಜ. ನಡೆಯುವ ಮನುಷ್ಯ ಎಡವೇ ಎಡುವುತ್ತಾನೆ. ನಾನು ತಪ್ಪು ಮಾಡಿದ್ದರೆ ಅದನ್ನು ಕೇಳಬೇಕಾದದ್ದು ನನ್ನ ಕುಟುಂಬದವರು. ಆದರೂ ನಾನು ಯಾವುದೇ ತಪ್ಪು ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು.
`ಈಗಿನ ತಂತ್ರಜ್ಞಾನದಲ್ಲಿ ಯಾರು ಏನನ್ನು ಬೇಕಾದರೂ ಎಡಿಟ್ ಮಾಡಬಹುದು. ಯಾರ ಮುಖಕ್ಕೆ ಏನನ್ನಾದರೂ ಜೋಡಿಸಬಹುದು. ಯಾರದೋ ದೇಹ ಗ್ರಾಫಿಕ್ ಮಾಡಬಹುದು. ಮಹಾನುಭಾವನೊಬ್ಬ ರೇಣುಕಾಚಾರ್ಯರ ಸಿಡಿ ಇದೆ ಎಂದು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ಬಗ್ಗುವುದಿಲ್ಲ. ನನ್ನ ವಿರುದ್ಧ ಆರೋಪ ಮಾಡುವವರು ಮೊದಲು ಜೀವನದಲ್ಲಿ ನೀವು ಏನು ಮಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ' ಎಂದು ಅವರು, ಮಾಜಿ ಸಚಿವ ಯೋಗೇಶ್ವರ್ ವಿರುದ್ಧ ಲೇವಡಿ ಮಾಡಿದರು.