ಪಿಒಕೆ ಮತದಾನದ ಬಗ್ಗೆ ಭಾರತದ ಹೇಳಿಕೆ ತಿರಸ್ಕರಿಸಲು ಭಾರತದ ರಾಜತಾಂತ್ರಿಕರಿಗೆ ಪಾಕ್ ಸಮನ್ಸ್

Update: 2021-07-30 16:56 GMT

ಇಸ್ಲಮಾಬಾದ್, ಜು.30: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಬಗ್ಗೆ ಭಾರತದ ಹೇಳಿಕೆಯನ್ನು ತಿರಸ್ಕರಿಸಿರುವ ಬಗ್ಗೆ ಮಾಹಿತಿ ನೀಡಲು ಪಾಕಿಸ್ತಾನ ಭಾರತದ ಹೈಕಮಿಶನ್ನ ರಾಜತಾಂತ್ರಿಕರಿಗೆ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ. ಭಾರತದ ಪ್ರತಿಭಟನೆಯನ್ನು ಸಂಪೂರ್ಣ ತಿರಸ್ಕರಿಸಿರುವುದನ್ನು ತಿಳಿಸಲು ಮತ್ತು ಜಮ್ಮು-ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನದ ಸ್ಪಷ್ಟ ಮತ್ತು ಸ್ಥಿರ ನಿಲುವನ್ನು ವ್ಯಕ್ತಪಡಿಸಲು ಭಾರತದ ಹೈಕಮಿಷನ್ನ ಸಹಾಯಕ ರಾಯಭಾರಿಗೆ ವಿದೇಶ ವ್ಯವಹಾರ ಇಲಾಖೆ ಸಮನ್ಸ್ ನೀಡಿದೆ ಎಂದು ಪಾಕಿಸ್ತಾನದ ವಿದೇ ವ್ಯವಹಾರ ಇಲಾಖೆ ಹೇಳಿಕೆ ನೀಡಿದೆ.

  ಜುಲೈ 25ರಂದು ಪಿಒಕೆಯಲ್ಲಿ ನಡೆದಿದ್ದ ಚುನಾವಣೆಯನ್ನು ಅಂಗೀಕರಿಸುವುದಿಲ್ಲ ಎಂದು ಭಾರತ ಹೇಳಿತ್ತು. ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರೀಕ್ ಇ ಇನ್ಸಾಫ್ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ತನ್ನ ಅಕ್ರಮ ಸ್ವಾಧೀನತೆಯನ್ನು ಮರೆಮಾಚಲು ಈ ರೀತಿಯ ತೋರಿಕೆಯ ಉಪಕ್ರಮ ನಡೆದಿದ್ದು ಈ ವಿಷಯಕ್ಕೆ ಸಂಬಂಧಿಸಿ ಪ್ರಭಲ ಪ್ರತಿಭಟನೆ ಸಲ್ಲಿಸಿರುವುದಾಗಿ ಭಾರತ ಹೇಳಿತ್ತು. ಭಾರತದ ಪ್ರದೇಶದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಸ್ಥಾನಾಧಿಕಾರವಿಲ್ಲ ಮತ್ತು ತಕ್ಷಣ ಭಾರತದ ಪ್ರದೇಶದ ಅಕ್ರಮ ಸ್ವಾಧೀನತೆಯನ್ನು ತೆರವುಗೊಳಿಸಬೇಕು ಎಂದು ಭಾರತದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದರು. ಜೊತೆಗೆ, ಜಮ್ಮು ಕಾಶ್ಮೀರದ ಬಗ್ಗೆ ಚೀನಾ ಮತ್ತು ಪಾಕಿಸ್ತಾನ ನೀಡಿದ್ದ ಜಂಟಿ ಹೇಳಿಕೆಯನ್ನು ತಿರಸ್ಕರಿಸಿದ್ದ ಅವರು, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಎಂದೆಂದಿಗೂ ಭಾರತದ ಪ್ರದೇಶವಾಗಿಯೇ ಇರಲಿದೆ ಎಂದು ಸ್ಪಷ್ಟಪಡಿಸಿದ್ದರು.

ಭಾರತ-ಪಾಕ್ ನಡುವಿನ ಜಮ್ಮು ಕಾಶ್ಮೀರ ವಿವಾದವು 1948ರಿಂದಲೂ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಅಜೆಂಡಾದಲ್ಲಿದ್ದು ಈ ಬಗ್ಗೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಅಂತರಾಷ್ಟ್ರಿಯ ಮಟ್ಟದಲ್ಲಿ ವಿವಾದಿತ ರಾಜ್ಯವೆಂದು ಗುರುತಿಸಲಾಗಿರುವ ಜಮ್ಮು ಕಾಶ್ಮೀರದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯಗಳನ್ನು ಧಿಕ್ಕರಿಸಿ ಏಕಪಕ್ಷೀಯವಾಗಿ ಬದಲಾವಣೆ ತರಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನದ ವಿದೇಶ ಕಾರ್ಯಾಲಯ ಹೇಳಿದೆ. ಅಲ್ಲದೆ, ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯ ನಿರ್ಣಯಗಳನ್ನು ಜಾರಿಗೊಳಿಸಲು ಭಾರತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News