ಕೋವಿಡ್‍ನಿಂದ ಬದುಕು ಕಳಕೊಂಡವರ ತಲೆ ಮೇಲೆ ತೆರಿಗೆ ಹೇರಿದ್ದೆ ಸರಕಾರದ ಸಾಧನೆ: ಡಿ.ಕೆ.ಶಿವಕುಮಾರ್

Update: 2021-07-30 17:25 GMT

ಹುಬ್ಬಳ್ಳಿ, ಜು. 30: `ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ನಿದ್ರಾವಸ್ಥೆಯಲ್ಲಿದ್ದ ರಾಜ್ಯ ಸರಕಾರವನ್ನು ಎಚ್ಚರಿಸಿ, ಕೆಲಸಕ್ಕೆ ಇಳಿಸಿದ್ದೆ ಕಾಂಗ್ರೆಸ್ ಪಕ್ಷ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಸರಕಾರ ಕೊಟ್ಟ ಯಾವುದೇ ಭರವಸೆ ಈಡೇರಲಿಲ್ಲ. ಅವರು ಕೇವಲ ದೀಪ ಹಚ್ಚಿಸಿ, ಚಪ್ಪಾಳೆ ಹೊಡೆಸಿ, ಜಾಗಟೆ ಬಾರಿಸುವಂತೆ ಮಾಡಿದ್ದರು ಅಷ್ಟೇ. ನಾನು ಹಾಗೂ ವಿಪಕ್ಷ ನಾಯಕರು ಸೇರಿ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ಸರ್ವಪಕ್ಷ ಸಭೆ ಕರೆಯುವಂತೆ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮಾಡಿದೆವು' ಎಂದು ಸ್ಮರಿಸಿದರು.

`ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಹೋರಾಟ ಮಾಡಿದೆವು. ನಂತರ ಇದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಯಿತು. ರಾಜ್ಯದ ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಸ್ವಂತ ಹಣದಲ್ಲಿ ಬಡವರಿಗೆ ಆಹಾರ ಕಿಟ್ ನೀಡಿದರು. ಆಂಬುಲೆನ್ಸ್, ಮೆಡಿಕಲ್ ಕಿಟ್ ಪೂರೈಸಿದರು. ಆದರೆ ಬಿಜೆಪಿ ನಾಯಕರು ಸರಕಾರದ ಆಹಾರ ಕಿಟ್‍ಗಳ ಮೇಲೆ ತಮ್ಮ ಫೆÇೀಟೋ ಹಾಕಿಕೊಂಡು ಪ್ರಚಾರ ಪಡೆದರು' ಎಂದು ಶಿವಕುಮಾರ್ ದೂರಿದರು.

`ಇನ್ನು ಆಕ್ಸಿಜನ್ ಕೊರತೆಯಿಂದ ಜನ ಸಾಯುತ್ತಿದ್ದರೂ ಸರಕಾರ ಸುಳ್ಳು ಲೆಕ್ಕ ನೀಡಿತ್ತು. ಆದರೆ, ನಾನು ಹಾಗೂ ವಿಪಕ್ಷ ನಾಯಕರು ಈ ಸುಳ್ಳು ಬಯಲು ಮಾಡಿದೆವು. ರಾಜ್ಯದಲ್ಲಿ 3ಲಕ್ಷಕ್ಕೂ ಹೆಚ್ಚು ಜನ ಕೋವಿಡ್‍ಗೆ ಬಲಿಯಾಗಿದ್ದು, ಸರಕಾರ ಡೆತ್ ಆಡಿಟ್ ಮಾಡಿಲ್ಲ. ರೈತರಿಗೆ ಘೋಷಿಸಿದ ಪರಿಹಾರವನ್ನು ಇನ್ನೂ ನೀಡಿಲ್ಲ. ಇನ್ನು ಚಾಲಕರಿಗೆ ಪ್ಯಾಕೇಜ್ ಘೋಷಿಸಿ 25 ಲಕ್ಷ ಚಾಲಕರ ಪೈಕಿ 8.5ಲಕ್ಷ ಚಾಲಕರು ನೋಂದಣಿಯಾಗಿದ್ದು, ಅದರಲ್ಲಿ ಪರಿಹಾರ ಪಡೆದವರು ಕೇವಲ ಒಂದೂವರೆ ಲಕ್ಷ ಮಂದಿ ಮಾತ್ರ. ಕೇಂದ್ರ ಸರಕಾರದ 20 ಲಕ್ಷ ಕೋಟಿ ರೂ.ಪ್ಯಾಕೇಜ್‍ನಲ್ಲಿ ಯಾರಿಗೆ ಎಷ್ಟು ಸಿಕ್ಕಿದೆ?' ಎಂದು ಶಿವಕುಮಾರ್ ಪ್ರಶ್ನಿಸಿದರು.

`ಕೋವಿಡ್ ಹೆಸರಲ್ಲಿ ಬಿಜೆಪಿ ಸರಕಾರ ಕೊಳ್ಳೆ ಹೊಡೆದಿದೆ. ಅವರ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆದಿದ್ದೇವೆ. ಹಾಸಿಗೆಯಿಂದ ಹಿಡಿದು ಲಸಿಕೆ, ಆಕ್ಸಿಜನ್, ಚಿಕಿತ್ಸೆ, ಶವ ಸಂಸ್ಕಾರದವರೆಗೆ ಎಲ್ಲದಕ್ಕೂ ಕ್ಯೂ ನಿಲ್ಲುವಂತೆ ಮಾಡಿದರು. ಸಂಸದ ತೇಜಸ್ವಿ ಸೂರ್ಯ ಅವರು ಬಯಲಿಗೆಳೆದ ಹಾಸಿಗೆ ಹಗರಣದ ವಾರಸುದಾರರು ಯಾರು? ವಿಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ನಮ್ಮ ನಾಯಕರ ಸೇವೆಗೆ ನಾವು ಹೆಮ್ಮೆ ಪಡುತ್ತೇವೆ. ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಜನರಿಗೆ ನೆರವಾಗಿದ್ದೇವೆ. ಸರಕಾರ ಸಣ್ಣ ತೆರಿಗೆಯನ್ನೂ ಕಡಿಮೆ ಮಾಡಿ ಜನಸಾಮಾನ್ಯರಿಗೆ ನೆರವಾಗಲಿಲ್ಲ. ಕೋವಿಡ್‍ನಿಂದ ಬದುಕು ಕಳೆದುಕೊಂಡಿದ್ದವರ ತಲೆ ಮೇಲೆ ತೆರಿಗೆ ಹೊರೆ ಹೇರಿ ಅಮಾನವೀಯವಾಗಿ ನಡೆದುಕೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ಈ ಸರಕಾರ ಸಂಪೂರ್ಣ ವಿಫಲವಾಗಿದೆ' ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News