ಸುಂಟಿಕೊಪ್ಪ: ಕೋವಿಡ್ ಲಸಿಕೆಗೆ ನೂಕು ನುಗ್ಗಲು

Update: 2021-07-31 12:12 GMT

ಮಡಿಕೇರಿ: ಸುಂಟಿಕೊಪ್ಪದಲ್ಲಿ ಕೋವಿಡ್ ಲಸಿಕೆ ಪಡೆಯಲು ನೂಕು ನುಗ್ಗಲು ಉಂಟಾಯಿತು. ಲಭ್ಯತೆ ಇದ್ದ 100 ಲಸಿಕೆಗಾಗಿ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 500 ಮಂದಿ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಲಸಿಕೆ ಕೊರತೆಯಿಂದ ಗೊಂದಲ ಸೃಷ್ಟಿಯಾಯಿತ್ತಲ್ಲದೆ ಪೊಲೀಸರು ಕೂಡ ಆಗಮಿಸಬೇಕಾಯಿತು.

ಕಳೆದ ಒಂದು ವಾರದಿಂದ ಕೋವಿಡ್ ಲಸಿಕೆ ಬಂದಿರಲಿಲ್ಲ. ಸುಂಟಿಕೊಪ್ಪ ಹೋಬಳಿಯ ಆರೋಗ್ಯ ಉಪಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಇದನ್ನು ಗಮನಿಸಿದ ಚೆಟ್ಟಳ್ಳಿ, ಭೂತನಕಾಡು ನಾರ್ಗಾಣೆ, ಶ್ರೀದೇವಿ ಮತ್ತಿಕಾಡು, ಗದ್ದೆಹಳ್ಳ, ಸುಂಟಿಕೊಪ್ಪ, ಕೆದಕಲ್, ಹಾಲೇರಿ, ಹೊರೂರು, 7ನೇ ಹೊಸಕೋಟೆ, 7ನೇ ಮೈಲು ವ್ಯಾಪ್ತಿಯಿಂದ ಆಗಮಿಸಿದ ಗ್ರಾಮಸ್ಥರು ಬೆಳಗ್ಗೆ 6 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಸುರಕ್ಷಿತ ಅಂತರವನ್ನು ಮರೆತು ನೂಕು ನುಗ್ಗಲು ಉಂಟಾಯಿತು. 

ಸರಕಾರ ಒಂದು ಆರೋಗ್ಯ ಕೇಂದ್ರಕ್ಕೆ 100 ಲಸಿಕೆಯನ್ನು ಮಾತ್ರ ನೀಡುತ್ತಿದೆ. ಕಳೆದ 1 ವಾರದಿಂದ ಲಸಿಕೆ ದೊರೆಯದೆ ಕಂಗಾಲಾದ ಜನ ಇಂದು ಲಸಿಕೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಬಂದು ಸೇರಿದ್ದರು.

ಸುಂಟಿಕೊಪ್ಪ ಹೋಬಳಿಗೆ 7 ಗ್ರಾಮ ಪಂಚಾಯಿತಿಗಳು ಒಳಪಡುತ್ತವೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ 12 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಲಸಿಕೆಯನ್ನು ಪೂರೈಸಬೇಕೆಂದು ಕೆದಕಲ್ ಪಂಚಾಯಿತಿ ಉಪಾಧ್ಯಕ್ಷ ಸಂಜುಪೊನ್ನಪ್ಪ ಒತ್ತಾಯಿಸಿದ್ದಾರೆ.

ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಲಸಿಕೆಯನ್ನು ಹೆಚ್ಚಾಗಿ ಸರಬರಾಜುಗೊಳಿಸಿದರೆ ಸುಂಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಒತ್ತಡ ಕಡಿಮೆಯಾಗಲಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಗಮನಹರಿಸಬೇಕೆಂದು ಕನ್ನಡ ರಕ್ಷಣಾ ವೇದಿಕೆಯ ಸದಸ್ಯ ಆಶೋಕ್ ಹಾಗೂ ಎಸ್‍ಡಿಪಿಐ ಪಕ್ಷದ ಖಜಾಂಜಿ ಲತೀಫ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News