ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲೇ 2023ರ ಚುನಾವಣೆ ಎದುರಿಸುತ್ತೇವೆ: ಕೆ.ಎಸ್. ಈಶ್ವರಪ್ಪ

Update: 2021-07-31 12:35 GMT

ಬೆಂಗಳೂರು, ಜು. 31: ಮುಂಬರುವ 2023ರ ವಿಧಾನಸಭೆ ಚುನಾವಣೆಯನ್ನು ಪಕ್ಷ ಪೂರ್ಣ ಪ್ರಮಾಣದಲ್ಲಿ ಬಹುಮತ ಗಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ  ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರು. ದುರದೃಷ್ಟ ನಾಲ್ಕು ಬಾರಿಯೂ ಪಕ್ಷಕ್ಕೆ ಪೂರ್ಣ ಪ್ರಮಾಣದ ಬಹುಮತ ಇರಲಿಲ್ಲ. ಇದರಿಂದಾಗಿ ಗೊಂದಲಗಳು ಉಂಟಾದವು. ಮುಂದಿನ ಚುನಾವಣೆಯನ್ನು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಸಂಘಟನೆಯ ಶಕ್ತಿಯಿಂದಲೇ ಎದುರಿಸಿ ಪೂರ್ಣ ಬಹುಮತ ಪಡೆಯಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸರಕಾರವನ್ನು ಮುನ್ನಡೆಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷ ಸಂಘಟನೆಯನ್ನು ಬಲಪಡಿಸಲಿದ್ದಾರೆ'ಎಂದ ಈಶ್ವರಪ್ಪ, `ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬುದು ಅನೇಕರ ಅಪೇಕ್ಷೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಮಂದಿ ದೂರವಾಣಿ ಕರೆಮಾಡಿ ಅವರ ಅನಿಸಿಕೆ ಹಂಚಿಕೊಂಡಿದ್ದಾರೆ. ಆದರೆ, ಪಕ್ಷದ ದೃಷ್ಟಿಯಿಂದ ಯಾರಿಗೆ ಯಾವ ಸ್ಥಾನ ನೀಡಿದರೆ ಅನುಕೂಲ ಆಗಲಿದೆ ಎಂಬುದನ್ನು ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳಿಗೆ ಬಿಜೆಪಿ ನೀಡಿದಷ್ಟು ಅವಕಾಶಗಳನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ 45 ಮಂದಿ ಸಚಿವರಿದ್ದಾರೆ. ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಶೇಕಡ 27ರಷ್ಟು ಮೀಸಲಾತಿ ನೀಡಲಾಗಿದೆ. ಬಿಜೆಪಿ ವಿರುದ್ಧದ ಆರೋಪಗಳಿಗೆ ಯಾವ ಆಧಾರವೂ ಇಲ್ಲ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಆರೆಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭೇಟಿಗೆ ವಿಶೇಷ ಏನೂ ಇಲ್ಲ. ಬಿಜೆಪಿ ಪಕ್ಷ ಸಂಘಟನೆ ಮತ್ತು ಸರಕಾರದ ಭಾಗವಾಗಿರುವ ನಾವೆಲ್ಲರೂ ಆಗಾಗ ಮುಖಂಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಿರುತ್ತೇವೆ. ಅದೇ ರೀತಿಯಲ್ಲಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಕೆ.ಎಸ್.ಈಶ್ವರಪ್ಪ ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸ್ಪಷ್ಟಣೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News