ಮಠಾಧೀಶರ ಬೆದರಿಕೆಗೆ ಬಿಜೆಪಿಯಲ್ಲಿ‌ ಕವಡೆ ಕಾಸಿನ ಕಿಮ್ಮತ್ತಿಲ್ಲ: ಕೆ. ಎಸ್. ಈಶ್ವರಪ್ಪ

Update: 2021-08-01 12:07 GMT

ವಿಜಯಪುರ: ಮಠಾಧೀಶರ ಗೊಡ್ಡು ಬೆದರಿಕೆಗೆ  ಬಿಜೆಪಿಯಲ್ಲಿ‌ ಕವಡಿ ಕಾಸಿನ ಕಿಮ್ಮತ್ತಿಲ್ಲ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ತೀಕ್ಷ್ಣವಾಗಿ ಸ್ವಾಮೀಜಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಭಾನುವಾರ ಮಾತನಾಡಿದ‌ ಅವರು, ತಮ್ಮ‌ ತಮ್ಮ ಸಮಾಜದ ಶಾಸಕರನ್ನು ಮಂತ್ರಿ ಮಾಡಿ ಎಂದು ಮಠಾಧೀಶರು ಹೇಳುವುದು ತಪ್ಪಲ್ಲ. ಆದರೆ ಶಾಸಕರು ಹೇಳುವುದು ತಪ್ಪು. ಇನ್ನೊಂದೆಡೆ ನಮ್ಮ‌ ಸಮಾಜದ ವ್ಯಕ್ತಿಗೆ‌ ಮಂತ್ರಿ‌ ಮಾಡದಿದ್ದರೆ ಬಿಜೆಪಿ ಸರ್ವನಾಶ ಅಂತಾ ಹೇಳುವುದು‌ ತಪ್ಪು ಎಂದು ಮಠಾಧೀಶರಿಗೆ ಸಲಹೆ ಮಾಡಿದರು. 

ಧರ್ಮ ವಿಚಾರದಲ್ಲಿ ನಾವೂ ಇದ್ದೇವೆ. ಆದರೆ ಮಠಾಧೀಶರು ಶಾಪ ಹಾಕುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಬೊಮ್ಮಾಯಿ‌ ಸಂಪುಟದಲ್ಲಿ ಸ್ಥಾನ ಸಿಗಲಿ, ಬಿಡಲಿ. ಆದರೆ ರಾಯಣ್ಣ ಬ್ರಿಗೇಡ್ ಮುಂದುವರಿಸಲ್ಲ ಎಂದು ಸ್ಪಷ್ಟಪಡಿಸಿದರು. 

ಪಕ್ಷದ ಹೈಕಮಂಡ್ ನವರು ರಾಯಣ್ಣ ಬ್ರಿಗೇಡ್ ಕೈ ಬಿಡುವಂತೆ ಸೂಚಿಸಿದ್ದಾರೆ. ಹಾಗಾಗಿ ಭವಿಷ್ಯದ ದಿನಗಳಲ್ಲಿ ಅದರತ್ತ ಕಿಂಚಿತ್ ಲಕ್ಷ ವಹಿಸಲ್ಲ. ಬರಲಿರುವ ಚುನಾವಣೆಯಲ್ಲಿ ಪೂರ್ಣ ಬಹುಮತದ ಸರಕಾರ ತರುವುದೇ ಬಿಜೆಪಿಯ ಗುರಿಯಾಗಿದೆ ಎಂದು ಈಶ್ವರಪ್ಪ ಹೇಳಿದರು. 

ಪಕ್ಷ ಪೂರ್ಣ ಬಹುಮತ ತರುವಷ್ಟು ಶಕ್ತಿ ಶಾಲಿಯಾಗಿರಲಿಲ್ಲ. ಈಗ ಕಟೀಲ್ ಅವರ ನೇತೃತ್ವದಲ್ಲಿ ಸಂಘಟನೆ ನಡೆದಿದೆ ಎಂದರು.

ಇನ್ನೂ ಒಂದು‌ ವರ್ಷ 10 ತಿಂಗಳ ಅವಧಿ ಬಾಕಿಯಿದ್ದು, ಅಷ್ಟರೊಳಗಾಗಿ‌ ನಿಷ್ಠಾವಂತ ಕಾರ್ಯಕರ್ತರ ತಂಡ ಕಟ್ಟುವ‌ ಮೂಲಕ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು. 

ಜಗದೀಶ್ ಶೆಟ್ಟರ್ ಅವರು‌ ಸಿಎಂ ಬೊಮ್ಮಾಯಿ‌ ಅವರಿಗಿಂತ ಹಿರಿಯರಾಗಿದ್ದರಿಂದ ಅವರು ಬೊಮ್ಮಾಯಿ‌ ಸಂಪುಟ ಸೇರ್ಪಡೆಗೆ‌ ನಿರಾಕರಿಸಿದ್ದಾರೆ. ಹಾಗಾಗಿ‌ ಅವರ ನಿರ್ಧಾರವನ್ನು ಬೇರೆ ರೀತಿ‌ ಅರ್ಥೈಸಬೇಕಿಲ್ಲ. ಪಕ್ಷ ನೀಡುವ ಜವಾಬ್ದಾರಿ ನಿಷ್ಠೆಯಿಂದ ಮಾಡುವುದಾಗಿ ತಿಳಿಸಿದ ಅವರು, ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುವುದು ಬಿಜೆಪಿ ಸಂಸ್ಕೃತಿ ಎಂದರು. 

ಬಿಎಸ್ ವೈ ರಾಜೀನಾಮೆಯಿಂದ ಖುಷಿಯಲ್ಲಿದ್ದ ಕಾಂಗ್ರೆಸ್ ಗೆ ಈಗ ನಿರಾಶೆಯಾಗಿದೆ. ನಾನೇ ಶಾಸಕ, ನಾನೇ ಸಿಎಂ ಎನ್ನುವುದು ಕಾಂಗ್ರೆಸ್ ಸಂಸ್ಕೃತಿ. ನಮ್ಮದಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ‌ ನಡೆಸಿದರು. 

 ಬಹಿರಂಗ ಹೇಳಿಕೆ ನಿಲ್ಲಿಸಿ

ಯತ್ನಾಳ್ ಅವರಿಗೆ ಸ್ನೇಹಿತನಾಗಿ ಹೇಳುತ್ತೇನೆ. ಬಹಿರಂಗ ಹೇಳಿಕೆ ‌ಕೊಟ್ಟು ಅವರೇ ಹಾಳಾಗುತ್ತಿದ್ದಾರೆ. ಅವರು ನನ್ನ ಆತ್ಮೀಯ ಸ್ನೇಹಿತ. ಹಾಗಾಗಿ ಬಹಿರಂಗ ಹೇಳಿಕೆ ಕೊಡುವುದನ್ನು ತಕ್ಷಣ ನಿಲ್ಲಿಸಬೇಕೆಂದು ಯತ್ನಾಳ್ ಗೆ ಬುದ್ದಿವಾದ ಹೇಳಿದರು

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಸಾಬು ಮಾಶ್ಯಾಳ, ರಾಜು‌ ಬಿರಾದಾರ, ಚಿದಾನಂದ ಚಲವಾದಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News