ಸಚಿವ ಸಂಪುಟ ರಚನೆ: ಸೋಮವಾರ ವರಿಷ್ಟರ ಸಂದೇಶ ಬರುವ ನಿರೀಕ್ಷೆ ಇದೆ; ಮುಖ್ಯಮಂತ್ರಿ ಬೊಮ್ಮಾಯಿ

Update: 2021-08-01 12:12 GMT

ಬೆಂಗಳೂರು, ಆ. 1: `ಸಚಿವ ಸಂಪುಟ ರಚನೆ ಸಂಬಂಧ ನಾಳೆ(ಆ.2)ಯೊಳಗೆ ವರಿಷ್ಟರಿಂದ ಸಂದೇಶ ಬರುವ ನಿರೀಕ್ಷೆ ಇದೆ. ಹೈಕಮಾಂಡ್‍ನಿಂದ ಸೂಚನೆ ಬಂದ ಕೂಡಲೇ ಸಚಿವ ಸಂಪುಟ ರಚನೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಆರ್.ಟಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್ ಸಂದೇಶವನ್ನು ಎದುರು ನೋಡಲಾಗುತ್ತಿದೆ. ವರಿಷ್ಠರು ಸೂಚನೆ ನೀಡುತ್ತಿದ್ದಂತೆ ಸಂಪುಟ ರಚನೆ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ ಎಂದು ಸ್ಪಷ್ಟಣೆ ನೀಡಿದರು.

ಯಡಿಯೂರಪ್ಪ ಬಳಿ ಚರ್ಚೆ: ಸಿಎಂ ನಿವಾಸಕ್ಕೆ ಸಚಿವಾಕಾಂಕ್ಷಿಗಳು ಆಗಮಿಸಿದರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು, ಮಾಜಿ ಮುಖ್ಯಮಂತ್ರಿ ಬಿಎಸ್‍ವೈ ನಿವಾಸಕ್ಕೆ ಭೇಟಿ ನೀಡಿ ಕುತೂಹಲ ಮೂಡಿಸಿದರು. ಇನ್ನೆರಡು ದಿನದಲ್ಲಿ ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸದಿಲ್ಲಿ ತೆರಳಲಿದ್ದಾರೆ ಎನ್ನಲಾಗಿದ್ದು, ಹೈಕಮಾಂಡ್ ಸೂಚನೆ ಹಿನ್ನೆಲೆ ಪರಿಷ್ಕøತ ಪಟ್ಟಿಯೊಂದಿಗೆ ದಿಲ್ಲಿಗೆ ತೆರಳಲಿದ್ದಾರೆ. 

ಈ ಮೊದಲು ದಿಲ್ಲಿಗೆ ತೆರಳುವ ಮುನ್ನ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಬೊಮ್ಮಾಯಿ ದಿಲ್ಲಿಯಿಂದ ವಾಪಸಾದ ಬಳಿಕ ಮತ್ತೆ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸಂಪುಟ ರಚನೆ ಕುರಿತಂತೆ ಹೈಕಮಾಂಡ್ ನೀಡಿರುವ ಸೂಚನೆಗಳ ಬಗ್ಗೆ ಬಿಎಸ್‍ವೈ ಜೊತೆ ಚರ್ಚೆ ನಡೆಸಿದ್ದು, ಯಾರಿಗೆಲ್ಲಾ ಅವಕಾಶ ನೀಡಬೇಕು, ಯಾರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಸಚಿವಾಕಾಂಕ್ಷಿ ಶಾಸಕರು ಹಾಗೂ ಹಿರಿಯ ಮುಖಂಡರು ಸಿಎಂ ನಿವಾಸಕ್ಕೆ ದೌಡಾಯಿಸುತ್ತಿದ್ದು, ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಬಿ.ಸಿ.ಪಾಟೀಲ್ ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ, ಮಹೇಶ್ ಕುಮಟಳ್ಳಿ, ಶಿವನಗೌಡ ನಾಯಕ್ ಸೇರಿದಂತೆ ಹಲವು ಮುಖಂಡರು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಬಿ.ಸಿ.ಪಾಟೀಲ್, ಸಂಪುಟ ರಚನೆ ಬಗ್ಗೆ ನಾನು ಯಾವುದೇ ಚರ್ಚೆ ಮಾಡಿಲ್ಲ, ಖಾತೆ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ, ಅದೆಲ್ಲಾ ಬರಲಿ ಬಂದಾಗ ನೋಡೋಣ ಎಂದರು. ಗೃಹ ಖಾತೆ ಹೊಂದಿದ್ದ ಬೊಮ್ಮಾಯಿ ಸಿಎಂ ಆಗಿದ್ದು ಈಗ ಗೃಹ ಖಾತೆಗೆ ಬೇಡಿಕೆ ಇಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದರ ಬಗ್ಗೆ ಈಗ ನಾನೇನು ಹೇಳಲ್ಲ ಮುಂದೆ ನೋಡೋಣ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News