ಪ್ರವಾಹದ ತುರ್ತು ಪರಿಹಾರ ಕಾರ್ಯಕ್ಕೆ 660 ಕೋಟಿ ರೂ.ಬಿಡುಗಡೆ: ಸಿಎಂ ಬಸವರಾಜ ಬೊಮ್ಮಾಯಿ

Update: 2021-08-01 13:42 GMT

ಬೆಂಗಳೂರು, ಆ. 1: `ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡಿರುವ ರಸ್ತೆ-ಸೇತುವೆಗಳ ಪುನರ್ ನಿರ್ಮಾಣಕ್ಕೆ 660 ಕೋಟಿ ರೂ.ಗಳನ್ನು ತುರ್ತು ಪರಿಹಾರ ಕಾರ್ಯಕ್ಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ರವಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸಹಿತ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬೆಳಗಾವಿ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಒಟ್ಟು 13 ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಹಾನಿಯಾಗಿದೆ. 466 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟ ಸೃಷ್ಟಿಯಾಗಿದೆ. ಒಟ್ಟು 13 ಮಂದಿ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಕಣ್ಮರೆಯಾಗಿದ್ದಾರೆ ಎಂದರು.

ಮಳೆ ಮತ್ತು ಪ್ರವಾಹ ಪರಿಸ್ಥಿತಿ ಇಳಿದ ಕೂಡಲೇ ಸಂಪರ್ಕ ರಸ್ತೆ ಮತ್ತು ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರಾಜ್ಯ ಸರಕಾರದಿಂದ 510 ಕೋಟಿ ರೂ.ಹಾಗೂ ಎನ್‍ಡಿಆರ್‍ಎಫ್ ನಡಿಯಲ್ಲಿ 150 ಕೋಟಿ ರೂ. ಸೇರಿದಂತೆ ಒಟ್ಟು 660 ಕೋಟಿ ರೂ.ಗಳನ್ನು ತುರ್ತು ಪರಿಹಾರ ಕಾರ್ಯಗಳಿಗೆ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಅವರು ವಿವರ ನೀಡಿದರು.

ನಷ್ಟ ಸಮೀಕ್ಷೆಗೆ ಕೇಂದ್ರ ತಂಡಕ್ಕೆ ಮನವಿ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ನಷ್ಟದ ಅಂದಾಜು ಮಾಡಲು ಕೇಂದ್ರ ತಂಡವನ್ನು ರವಾನಿಸಲು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ. ಇದೀಗ ನಾನು ಮತ್ತೊಮ್ಮೆ ದಿಲ್ಲಿಗೆ ತೆರಳಿದರೆ ಈ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇನೆ ಎಂದರು.

ಮಳೆಯಿಂದ ಶೇ.75ರಷ್ಟು ಭಾಗ ಮನೆ ಹಾನಿಗೆ ಒಳಗಾಗಿದ್ದರೆ 5 ಲಕ್ಷ ರೂ. ಹಾಗೂ ಶೇ.50ರಷ್ಟು ಹಾನಿಯಾಗಿದ್ದರೆ 3 ಲಕ್ಷ ರೂ., ಭಾಗಶಃ ಅಲ್ಪಸ್ವಲ್ಪ ಹಾನಿಯಾಗಿದ್ದರೆ 50 ಸಾವಿರ ರೂ.ಪರಿಹಾರ ನೀಡಲಾಗುವುದು. ಈಗಾಗಲೇ ಸಂತ್ರಸ್ತರಿಗೆ 10 ಸಾವಿರ ರೂ. ನೀಡಲು ಸೂಚಿಸಿದ್ದು, ಈಗಾಗಲೇ ಹಣವನ್ನು ನೀಡಲಾಗುತ್ತಿದೆ. ಮಳೆ ಮತ್ತು ಪ್ರವಾಹದಿಂದ ಆಗಿರುವ ಮನೆ ಹಾನಿ ಹಾಗೂ ಬೆಳೆ ಹಾನಿ ಸಂಬಂಧ ಇನ್ನೂ 15 ದಿನಗಳ ಒಳಗೆ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬೆಳಗಾವಿ, ಉಡುಪಿ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇದೀಗ ಮಳೆ ಕಡಿಮೆಯಾದರೂ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದ ನೀರು ತುಂಬಿಕೊಂಡಿದ್ದು, ನೀರು ಹಾಗೆಯೇ ನಿಂತಿದ್ದು, ಅನೇಕ ಪ್ರದೇಶಗಳು ಜಲಾವೃತಗೊಂಡಿದೆ. ಇದರಿಂದಾಗಿ 466 ಗ್ರಾಮಗಳಲ್ಲಿ ಸಮಸ್ಯೆಯಾಗಿದೆ. ಮಳೆ-ಪ್ರವಾಹ ಇಳಿಕೆಯಾದ ಕೂಡಲೇ ಸಂಪರ್ಕ ರಸ್ತೆ, ಸೇತುವೆಗಳ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News