ಶಾಲೆ ಆರಂಭದ ಕುರಿತು ಖಾಸಗಿ ಶಾಲಾ ಅಸೋಸಿಯೇಷನ್ ಜತೆ ಚರ್ಚೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-08-01 13:38 GMT

ಬೆಂಗಳೂರು, ಆ. 1: `ರಾಜ್ಯದಲ್ಲಿ ಖಾಸಗಿ ಶಾಲೆಗಳ ಆರಂಭ ಕುರಿತು ಎಲ್ಲ ಆಯಾಮದಲ್ಲಿಯೂ ಚರ್ಚಿಸಿ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟದ ಜೊತೆಯಲ್ಲಿ ಚರ್ಚಿಸಿ, ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನಾಳೆಯಿಂದ ಶಾಲೆಗಳ ಆರಂಭಕ್ಕೆ ಮುಂದಾಗಿದ್ದ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟಕ್ಕೆ ಸೂಚನೆ ನೀಡಿ, ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ತಿಳಿಸಲಾಗಿದೆ.

ಈ ಸಂಬಂಧ ಖಾಸಗಿ ಶಾಲೆಗಳ ಸಂಘಟನೆಗಳೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಿದ್ದೇನೆ. ಮತ್ತೆ ಅವರ ಸಂಘಟನೆ ಜೊತೆ ಚರ್ಚೆ ಮಾಡುತ್ತೇನೆ. ಶಾಲೆಗಳ ಆರಂಭ ಕುರಿತು ಬೇರೆ-ಬೇರೆ ರಾಜ್ಯದಲ್ಲಿರುವ ಸ್ಥಿತಿಗತಿ ಮತ್ತು ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ. ವ್ಯಾಕ್ಸಿನೇಷನ್ ವ್ಯವಸ್ಥೆ ಯಾವ ರೀತಿ ಆಗಿದೆ. ಎಲ್ಲವನ್ನೂ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ತಜ್ಞರ ವರದಿಯನ್ನು ಆಧರಿಸಿ ಶಾಲೆಗಳನ್ನು ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಾಗುವುದು ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News