ಕಳಸ: ಭದ್ರಾ ನದಿ ತೀರಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ವೈದ್ಯ ನಾಪತ್ತೆ

Update: 2021-08-01 19:10 GMT

ಕಳಸ, ಆ.1: ಪಟ್ಟಣ ಸಮೀಪದಲ್ಲಿರುವ ಭದ್ರಾ ನದಿ ತೀರದ ವಶಿಷ್ಠ ತೀರ್ಥ ಎಂಬಲ್ಲಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ವೈದ್ಯರೊಬ್ಬರು ನಾಪತ್ತೆಯಾಗಿದ್ದು, ಕಾಲು ಜಾರಿ ನದಿ ಪಾಲಾಗಿರುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ ಹುಡುಕಾಟ ಆರಂಭಿಸಿದ್ದು, ಸಂಜೆಯಾದರೂ ರುದ್ರೇಶ್ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಬೆಂಗಳೂರು ಕೆಂಗೇರಿ ಮೂಲದ ಆಯುರ್ವೇದ ವೈದ್ಯ ರುದ್ರೇಶ್ ನದಿ ಪಾಲಾಗಿರುವ ವ್ಯಕ್ತಿ ಎಂದು ತಿಳಿದು ಬಂದಿದ್ದು, ವೈದ್ಯ ರುದ್ರೇಶ್ ಸೇರಿದಂತೆ 8 ಜನರ ತಂಡ ಬೆಂಗಳೂರಿನಿಂದ ಕಳಸಕ್ಕೆ ಆಗಮಿಸಿ ಇಲ್ಲಿಯ ಸ್ಥಳೀಯ ಹೋಂ ಸ್ಟೇ ಒಂದರಲ್ಲಿ ಶನಿವಾರ ತಂಗಿದ್ದರು. ರವಿವಾರ ಬೆಳಗ್ಗೆ ಸುಮಾರು 9 ಗಂಟೆಯ ಹೊತ್ತಿಗೆ ಭದ್ರಾ ನದಿ ತೀರದಲ್ಲಿರುವ ವಶಿಷ್ಠಾಶ್ರಮದ ಬಳಿ ಬಂದು ಅಲ್ಲಿಯ ತೂಗು ಸೇತುವೆ ಮತ್ತು ಅಲ್ಲಿನ ಸುಂದರ ಪರಿಸವರನ್ನು ವೀಕ್ಷಿಸಿದ್ದಾರೆ. ಈ ವೇಳೆ ವೈದ್ಯ ರುದ್ರೇಶ್ ಮೆಟ್ಟಿಲಿಳಿದು ನದಿಯ ಬದಿ ಹೋಗಿರುವುದನ್ನು ಜೊತೆಯಲ್ಲಿದ್ದ ಸ್ನೇಹಿತರು ಕಂಡಿದ್ದಾರೆ. ನದಿ ತೀರಕ್ಕೆ ಹೋಗಿದ್ದ ವೈದ್ಯ ಮತ್ತೆ ಹಿಂದಿರುಗದಿರುವುದನ್ನು ಕಂಡ ಸ್ನೇಹಿತರು ನದಿ ತೀರದಲ್ಲಿ ರುದ್ರೇಶ್ ಅವರನ್ನು ಹುಡುಕಾಡಿದರೂ ಪತ್ತೆಯಾಗಿಲ್ಲ. ಮಳೆಗಾಲವಾಗಿರುವುದರಿಂದ ತುಂಬಿ ಹರಿಯುತ್ತಿರುವ ಭದ್ರಾನದಿಯ ದಡದಲ್ಲಿ ಕಾಲು ಜಾರಿ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಎಸ್‍ಡಿಆರ್‍ಎಫ್ ತಂಡ, ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಅಗ್ನಿ ಶ್ಯಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಳಗ್ಗೆಯಿಂದ ಸಂಜೆವರೆಗೂ ರುದ್ರೇಶ್‍ಗಾಗಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ತುಂಬಾ ಅಪಾಯಕಾರಿ ಸ್ಥಳವಾಗಿರುವುದರಿಂದ ನೀರಿನಲ್ಲಿ ಮುಳುಗುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಸ್ಥಳಕ್ಕೆ ಕಳಸ ಪೊಲೀಸರು ಸೇರಿದಂತೆ ಕಳಸ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಯಾ ಸದಾನಂದ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕವೀಶ್, ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ ಭೇಟಿ ನೀಡಿದ್ದಾರೆ.

ಘಟನೆ ಸಂಬಂಧ ಕಳಸ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು, ವೈದ್ಯ ರುದ್ರೇಶ್ ಬೆಂಗಳೂರಿನ ಆರ್ಯುವೇದ ಕಾಲೇಜಿನ ಸಹಾಯಕ ಪ್ರೋಪೆಸರ್ ಆಗಿದ್ದಾರೆ. ವಿವಾಹಿತರಾಗಿದ್ದ ಇವರ ಪತ್ನಿಯೂ ವೈದ್ಯೆ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News