ಘಟಪ್ರಭಾ, ಕೃಷ್ಣಾ ನದಿ ಪ್ರವಾಹದಿಂದ ಬೀದಿಗೆ ಬಿದ್ದ ಜನರ ಬದುಕು
ಬಾಗಲಕೋಟೆ, ಆ.1: ಘಟಪ್ರಭಾ, ಕೃಷ್ಣಾ ನದಿ ಪ್ರವಾಹದಿಂದಾಗಿ ಬಾಗಲಕೋಟೆ, ರಾಯಚೂರು ಜಿಲ್ಲೆಯ ಜನರ ಜೀವನ ಬೀದಿಗೆ ಬಿದ್ದಿದ್ದು, ಸದ್ಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನೆರೆ ಸಂತ್ರಸ್ತರು ಪ್ರವಾಹದಿಂದಾಗಿ ರಾತ್ರೋರಾತ್ರಿ ಮನೆ ಬಿಟ್ಟು ಬಂದಿದ್ದಾರೆ. ಸದ್ಯ ನೀರು ಇಳಿದರೂ ಮನೆಗೆ ಹೋಗಲು ಭಯವಾಗುತ್ತಿದೆ ಎಂದು ಸಂತ್ರಸ್ತರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಬಾಗಲಕೋಟೆ: ಅಪೆಂಡಿಕ್ಸ್ ಆಪರೇಷನ್ ಗಾಯ ಗುಣಮುಖವಾಗುವ ಮೊದಲೇ ಘಟಪ್ರಭಾ ನದಿಯ ಪ್ರವಾಹ ಬಂದಿದೆ. ಹೀಗಾಗಿ, ತಾವು ಕಾಳಜಿ ಕೇಂದ್ರಕ್ಕೆ ಬರಬೇಕಾಯಿತು ಎಂದು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ರಮೀಜಾ ಎಂಬ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಹಣ್ಣು ವ್ಯಾಪಾರಕ್ಕೆ ಬಡ್ಡಿಗೆ ತಂದ ಒಂದುವರೆ ಲಕ್ಷ ರೂಪಾಯಿ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಅಪೆಂಡಿಕ್ಸ್ ಆಪರೇಷನ್‍ಗೆ ಐವತ್ತು ಸಾವಿರ ಖರ್ಚಾಗಿದೆ.
ಮನೆಯಲ್ಲಿನ ವಸ್ತುಗಳು ನೆನೆದು ಹಾಳಾಗಿವೆ. ಮೇಲಿಂದ ಮೇಲೆ ಹೀಗಾದರೆ ಹೇಗೆ ಬದುಕಬೇಕು? ನಮ್ಮ ಗೋಳನ್ನು ಯಾರು ಕೇಳುತ್ತಾರೆ? ಅಂತ ಪ್ರಶ್ನಿಸಿದ ಮಹಿಳೆ, ನಮ್ಮನ್ನು ಸ್ಥಳಾಂತರ ಮಾಡಿ ಪ್ರವಾಹದಿಂದ ಮುಕ್ತಿ ನೀಡಿ ಎಂದು ಆಗ್ರಹಿಸಿದ್ದಾರೆ.
ಪ್ರತಿ ವರ್ಷ ಪ್ರವಾಹದಿಂದ ನಮಗೆ ಬದುಕೇ ಸಾಕಾಗಿದೆ. ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಅಲೆದಾಡುವುದು ಸಾಕಾಗಿದೆ. ಸರಕಾರ ನಮಗೆ ಒಂದು ನೆಲೆಯನ್ನು ಕೊಡಬೇಕು. ನಮಗೆ ಪುನರ್ವಸತಿ ಕೇಂದ್ರದಲ್ಲೂ ಜಾಗ ಕೊಟ್ಟಿಲ್ಲ. ನಮ್ಮ ಮನೆಗಳೆಲ್ಲ ಈಗಾಗಲೇ ನೀರಿನಲ್ಲಿ ಮುಳುಗಿವೆ. ನೆರೆ ಬಳಿಕ ಯಾರೂ ನಮ್ಮನ್ನು ಕೇರ್ ಮಾಡುವುದಿಲ್ಲ ಎಂದು ಕಾಳಜಿ ಕೇಂದ್ರದಲ್ಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.
ಪಂಪ್ ಸೆಟ್‍ಗಾಗಿ ಈಜುತ್ತಾ ಬಂದ ರೈತರು: ಘಟಪ್ರಭಾ ಪ್ರವಾಹಕ್ಕೆ ಪಂಪ್ ಸೆಟ್‍ಗಳು ಕೊಚ್ಚಿ ಹೋಗಿದ್ದು, ಮುಧೋಳ ಭಾಗದ ರೈತರು ಪರದಾಡುತ್ತಿದ್ದಾರೆ. ಜಮೀನಿಗೆ ನೀರು ಸಾಗಿಸಲು ಅಳವಡಿಸಿದ್ದ ಪಂಪ್ ಸೆಟ್‍ಗಳು ಕೊಚ್ಚಿ ಹೋಗಿವೆ. ಹೀಗಾಗಿ ಘಟಪ್ರಭಾ ನದಿ, ಅಕ್ಕಪಕ್ಕದ ಹೊಲದಲ್ಲಿ ರೈತರು ಈಜುತ್ತಾ 5-6 ಕಿ.ಮೀ. ಬಂದಿದ್ದಾರೆ.
ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎದುರಾಗಿರುವ ಕೃಷ್ಣಾ ನದಿ ಪ್ರವಾಹ ಮುಂದುವರಿದಿದೆ. ಇದರಿಂದಾಗಿ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ನೀರಿನಲ್ಲಿ ಮುಳುಗಿ ಎಂಟು ದಿನಗಳಾಗಿದ್ದು, ಹಂಚಿನಾಳ, ಯರಗೋಡಿ ಸೇರಿ ವಿವಿಧ ಗ್ರಾಮಗಳ ಜನತೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ.
ದೇವದುರ್ಗದಿಂದ ಕಲಬುರಗಿಗೆ ನೇರ ಸಂಪರ್ಕ ಪ್ರವಾಹದಿಂದ ಸ್ಥಗಿತಗೊಂಡಿದೆ. ರಾಯಚೂರು ತಾಲೂಕಿನ ಅರಷಿಣಗಿ, ಗುರ್ಜಾಪುರ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಗದ್ದೆಗಳಿಗೆ ನೀರು ನುಗ್ಗಿದೆ. ಆತ್ಕೂರು, ಬುರ್ದಿಪಾಡ ಮತ್ತಿತರೆ ಗ್ರಾಮಗಳ ಬಳಿಯೂ ನದಿ ಉಕ್ಕಿ ಹರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದ್ದು, ಸಾಕಷ್ಟು ಸಂಖ್ಯೆಯ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಶಕ್ತಿ ನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ನೀರೊದಗಿಸುವ ಜಾಕ್‍ವೆಲ್, ಕೃಷ್ಣಾ ಪ್ರವಾಹದಲ್ಲಿ ಅರ್ಧದಷ್ಟು ಮುಳುಗಿದೆ. ವಿದ್ಯುತ್ ಉತ್ಪಾದನೆ ಸದ್ಯಕ್ಕೆ ನಡೆಯದಿರುವುದರಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ. ಗುರ್ಜಾಪುರ ಬಳಿ ಕೆಪಿಸಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನೀರು ಹರಿಯುತ್ತಿದ್ದು, ನದಿ ತೀರದ ಹೊಲಗಳಲ್ಲಿ ಅಳವಡಿಸಿದ್ದ ಪಂಪ್‍ಸೆಟ್‍ಗಳು ನೀರಿನಲ್ಲಿ ಮುಳುಗಿ ರೈತರಲ್ಲಿ ಆತಂಕ ಮೂಡಿಸಿದೆ.