ಓ ಮೆಣಸೇ...

Update: 2021-08-02 05:04 GMT

ಕೊರೋನ ಸಂಕಷ್ಟ ಪರಿಸ್ಥಿತಿಯಿಂದ ಹೊರಬರಲು ಮಾನವ ಕುಲಕ್ಕೆ ಬುದ್ಧನ ಚಿಂತನೆಗಳು ದಾರಿ ದೀಪವಾಗಿವೆ -ನರೇಂದ್ರ ಮೋದಿ, ಪ್ರಧಾನಿ
ಬೇರೆ ಕುಲಗಳಿಗೆ ಮಾತ್ರ ವ್ಯಾಕ್ಸಿನ್ ಉಪಯುಕ್ತವೇ?


ಧನ, ಜನಕ್ಕಿಂತ ಜ್ಞಾನಶಕ್ತಿಯೇ ಶ್ರೇಷ್ಠ - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಆದ್ದರಿಂದ ಜ್ಞಾನದ ವಾಹಕರು ಶ್ರೀಮಂತರು ಮತ್ತು ಫುಡಾರಿಗಳ ಸಹವಾಸದಿಂದ ದೂರ ಉಳಿಯಬೇಕು.


ಹಿರಿಯರನ್ನು ಬಳಸಿ ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿಯಾಗಿದೆ - ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ಮುಖಂಡ
ಮತ್ತೇನು ನಿಮ್ಮ ಪಕ್ಷದಂತೆ, ಇಡೀ ಪಕ್ಷವನ್ನೇ ಹಿರಿಯರ ಕಸದ ಬುಟ್ಟಿಯಾಗಿಸಬೇಕೇ?


ಯಡಿಯೂರಪ್ಪ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕಿದ್ದಾರೆ - ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ
ಪುಢಾರಿಗಳೆಂದ ಮೇಲೆ ಎಲ್ಲರೂ ಅಷ್ಟೇ - ಚೂರಿ ಹಿಡಿದು ಬೆನ್ನು ಹುಡುಕುತ್ತಿರುತ್ತಾರೆ.


ಹಿಂದೂ ಧರ್ಮ ಯಾವುದೇ ಪುಸ್ತಕದ ಅಡಿಪಾಯದಲ್ಲಿ ನಿಂತ ಧರ್ಮವಲ್ಲ - ತೇಜಸ್ವಿ ಸೂರ್ಯ, ಸಂಸದ
ಆದ್ದರಿಂದಲೇ ಅದು ನಿಮ್ಮಂತಹ ಸಾವಿರಾರು ಠಕ್ಕ ಪುಢಾರಿಗಳನ್ನು ಮೀರಿ ಮಿಂಚಿದೆ.


ಒಂಭತ್ತು ಬಾರಿ ಶಾಸಕರಾದವರಿಂದ ಹಿಡಿದು ಒಂದು ಬಾರಿ ಶಾಸಕರಾದವರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ - ಮುರುಗೇಶ್ ನಿರಾಣಿ, ಮಾಜಿ ಸಚಿವ
ಪುಢಾರಿಗಳೆಂದ ಮೇಲೆ, ಜ್ಞಾನ, ಅನುಭವ, ಸಾಮರ್ಥ್ಯ ಇತ್ಯಾದಿಗಳಲ್ಲಿ ಅವರ ನಡುವೆ ಎಷ್ಟು ವ್ಯತ್ಯಾಸವಿದ್ದರೂ ಅವರ ದುರಾಶೆಗಳು ಸಮಾನವಾಗಿರುತ್ತವೆ.


ರಾಜ್‌ಕುಂದ್ರಾ ಶೃಂಗಾರ ದೃಶ್ಯಗಳನ್ನು ಮೊಬೈಲ್ ಆ್ಯಪ್‌ಗೆ ಅಪ್‌ಲೋಡ್ ಮಾಡುತ್ತಿದ್ದರೇ ವಿನಃ ನೀಲಿಚಿತ್ರಗಳನ್ನು ನಿರ್ಮಾಣ ಮಾಡುತ್ತಿರಲಿಲ್ಲ - ಶಿಲ್ಪಾ ಶೆಟ್ಟಿ, ನಟಿ
ಚರ್ಚೆ ಇರುವುದು ಆ ಶೃಂಗಾರ ಚಿತ್ರಗಳ ನೈತಿಕ ಗುಣಮಟ್ಟದ ಕುರಿತೇ ಹೊರತು ಬಣ್ಣದ ಕುರಿತಲ್ಲ.


ಮಕ್ಕಳು, ಗರ್ಭಿಣಿಯರಿಗೆ ನೀಡುವ ಮೊಟ್ಟೆಯಲ್ಲಿ ಹಣ ಮಾಡಿ ಬದುಕುವ ಪರಿಸ್ಥಿತಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬರಬಾರದಿತ್ತು - ಉಮಾಶ್ರೀ, ಮಾಜಿ ಸಚಿವೆ
ಅವರಂಥವರನ್ನು ಸಚಿವರಾಗಿಸುವ ಮೌಢ್ಯದ ಸ್ಥಿತಿ ನಮ್ಮ ಜನತೆಗೆ ಬರಬಾರದಿತ್ತು.


ಭಾರತವು 2047ರ ವೇಳೆಗೆ ಅಮೆರಿಕ, ಚೀನಾ ಮಾದರಿಯಲ್ಲಿ ಶ್ರೀಮಂತ ರಾಷ್ಟ್ರವಾಗಲಿದೆ - ಮುಕೇಶ್ ಅಂಬಾನಿ, ಉದ್ಯಮಿ
ನಿಮ್ಮಂತಹ ಕೊಳ್ಳೆ ಶ್ರೀಮಂತರಿಂದ ಮುಕ್ತಿ ಪಡೆದು ಸಂಪನ್ನತೆಯನ್ನು ಸಾರ್ವತ್ರಿಕ ಗೊಳಿಸುವುದಕ್ಕೆ ಭಾರತೀಯರು ಅಷ್ಟು ವರ್ಷ ಕಾಯಬೇಕೇ?


ಬಿಜೆಪಿ ಸಂವಿಧಾನದಲ್ಲಿ 75 ವಯಸ್ಸು ಆದವರಿಗೆ ಯಾವುದೇ ಹುದ್ದೆ, ಅಧಿಕಾರ ಇಲ್ಲ ಎಂದು ಎಲ್ಲಿಯೂ ಹೇಳಿಲ್ಲ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ನಿಮ್ಮಂಥವರು ಆಶಾವಾದದಿಂದಾದರೂ ಪಕ್ಷದಲ್ಲಿ ಕೊಳೆಯುತ್ತಿರಲೆಂದು ಹಾಗೆ ಮಾಡಿರಬೇಕು.


ಯಡಿಯೂರಪ್ಪರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ - ಸಿ.ಟಿ.ರವಿ, ಶಾಸಕ
ಆದರೆ ನಿಮಗೇಕೆ ನಿವೃತ್ತಿಯನ್ನು ಕೊಟ್ಟಿಲ್ಲ?


ಆಡಳಿತದಲ್ಲಿ ಅದಕ್ಷತೆ, ಭ್ರಷ್ಟಾಚಾರ ಕಂಡುಬಂದರೆ ಅಂಥವರನ್ನು ತೆಗೆದುಹಾಕುವ ಕ್ರಮ ಬಿಜೆಪಿಯಲ್ಲಿದೆ -ವೀರಪ್ಪ ಮೊಯ್ಲಿ, ಕಾಂಗ್ರೆಸ್ ಮುಖಂಡ

ಅಲ್ಲಿಂದ ತೆಗೆದು ಹಾಕಿ ಭಡ್ತಿ ಕೊಟ್ಟು ಬಿಡುತ್ತಾರೆ.


ರಾಜ್ಯ ಪೀಠಕ್ಕಿಂತ ಗುರುಪೀಠ ಶ್ರೇಷ್ಠ - ನಳಿನ್‌ಕುಮಾರ್ ಕಟೀಲು, ಸಂಸದ
ಆದರೆ ರಾಜ್ಯ ಪೀಠ ಬಿಟ್ಟು ಗುರುಪೀಠ ಹಿಡಿದವರೆಲ್ಲೂ ಕಾಣಿಸುತ್ತಿಲ್ಲ.  ಉಲ್ಟಾ, ಗುರುಪೀಠ ಬಿಟ್ಟು ರಾಜ್ಯಪೀಠದ ಹಿಂದೆ ಓಡುತ್ತಿರುವವರು ಗಲ್ಲಿ ಗಲ್ಲಿ ಯಲ್ಲಿ ಮೆರೆಯುತ್ತಿದ್ದಾರೆ.


ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು, ಅವಕಾಶಗಳಿವೆ - ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ
ಪ್ರಥಮ ಬಾರಿ ಸಂವಿಧಾನದ ಕುರಿತು ಯಾವುದೋ ಪುಸ್ತಕದ ಪುಟವನ್ನು ಓದಿದಿರಾ ಸರ್?


ಅಕ್ರಮ ಗಣಿಗಾರಿಕೆಯನ್ನು ನಮ್ಮ ಕುಟುಂಬ, ಪಕ್ಷ ಯಾವತ್ತೂ ಬೆಂಬಲಿಸಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಸ್ವತಃ ಮಾಡಿಕೊಂಡಿದ್ದೀರೆಂಬುದು ಎಲ್ಲರಿಗೂ ಗೊತ್ತು.


ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರಿಗೆ ನನ್ನ ಮೇಲೆ ತುಂಬಾ ವಾತ್ಸಲ್ಯವಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ದತ್ತು ಸ್ವೀಕರಿಸಲು ಅರ್ಜಿ ಹಾಕುವಿರಾ?


12ನೇ ಶತಮಾನದಲ್ಲಿ ಬಸವಣ್ಣನವರಿಗೆ ತೊಂದರೆಕೊಟ್ಟ ಮನುವಾದಿಗಳು ಈಗ ಯಡಿಯೂರಪ್ಪರಿಗೆ ತೊಂದರೆ ಕೊಡುವುದು ದೊಡ್ಡ ವಿಷಯವಲ್ಲ -ಎಸ್.ಆರ್.ಪಾಟೀಲ್, ವಿ.ಪ.ವಿಪಕ್ಷ ನಾಯಕ
ಅವರು ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿಸಿದಾಗ ಗಾಂಧಿವಾದಿಗಳಾಗಿದ್ದರೇನು?


ಪೆಗಾಸಸ್ ಪ್ರಕರಣವನ್ನು ಅವಲೋಕಿಸಿದರೆ ದೇಶದ ಆಡಳಿತದಲ್ಲಿ ಸರ್ವಾಧಿಕಾರ ಇದೆ ಎನ್ನುವುದು ಗೊತ್ತಾಗುತ್ತಿದೆ -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ನೀವು ಮೊನ್ನೆ ತಾನೇ ನಿದ್ದೆಯಿಂದ ಎದ್ದಂತಿದೆಯಲ್ಲಾ?


ಕನ್ನಡಿಗರು ನೀಡುವವರೇ ಹೊರತು ಬೇಡುವವರಲ್ಲ - ಸಿ.ಎಂ.ಇಬ್ರಾಹೀಂ, ವಿ.ಪ.ಸದಸ್ಯ
ರಾಜಕಾರಣಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ನೀಡಿದ ಉದಾಹರಣೆಗಳಿವೆ.


ಸಚಿವ ಸ್ಥಾನದ ಆಕಾಂಕ್ಷಿ ವಿಷಯದಲ್ಲಿ ನಾನು ಸನ್ಯಾಸಿಯಂತೂ ಅಲ್ಲ - ಶಿವರಾಮ ಹೆಬ್ಬಾರ, ಶಾಸಕ
ಸನ್ಯಾಸಿಗಳಿಗೆ ಹೆಚ್ಚಿನ ಆದ್ಯತೆಯಂತೆ.


ರಾಜ್ಯ ಬಿಜೆಪಿ ಸರಕಾರ ತನ್ನ ಭಾರಕ್ಕೆ ತಾನೇ ಬಿದ್ದರೆ ಮಧ್ಯಂತರ ಚುನಾವಣೆಗೆ ನಾವು ಸಿದ್ಧ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅದಕ್ಕೆ ಮುನ್ನ ನಿಮ್ಮ ಪಕ್ಷ ತನ್ನ ಹಗುರತನದಿಂದ ಹಾರಿಹೋಗದಂತೆ ನೋಡಿಕೊಳ್ಳಿ.


ನಮ್ಮಿಬ್ಬರನ್ನು (ಸಿಎಂ ಬೊಮ್ಮಾಯಿ ಮತ್ತು ಆರ್.ಅಶೋಕ್) ಜೋಡೆತ್ತುಗಳೆಂದು ಕರೆಯುತ್ತಾರೆ - ಆರ್.ಅಶೋಕ್, ಮಾಜಿ ಸಚಿವ
ಬುದ್ಧಿಯ ಮಟ್ಟವನ್ನು ಅಳೆದವರು ಹಾಗೆ ಕರೆದಿರಬೇಕು.


ಈ ಜಗತಿನಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಸ್ನೇಹಕ್ಕೂ ಮೀರಿದ ಬಾಂಧವ್ಯ -ಆ್ಯಂಟನಿ ಬ್ಲಿಂಕೆನ್, ಅಮೆರಿಕ ಸಚಿವ
ಧಣಿ-ಒಕ್ಕಲು ಸಂಬಂಧದ ಬಗ್ಗೆ ಹೇಳುತ್ತಿದ್ದಾರೆ.


ನೈತಿಕ ನೆಲೆಯಲ್ಲಿ ಬೊಮ್ಮಾಯಿ ಸಂಪುಟದಲ್ಲಿ ನಾನು ಸೇರುವುದಿಲ್ಲ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಇತ್ತೀಚಿನ ದಿನಗಳಲ್ಲಿ ಅನೈತಿಕ ನೆಲೆಯಲ್ಲಿ ಸೇರಿದವರೇ ಹೆಚ್ಚು.


ಬಸವರಾಜ ಬೊಮ್ಮಾಯಿ ಸಿಎಂ ಆಗಿರುವುದರಿಂದ ‘ಸೂಪರ್ ಸಿಎಂ’ ಟ್ಯಾಗ್‌ಲೈನ್‌ನಿಂದ ನಾನು ಹೊರಬಂದಿದ್ದೇನೆ - ಬಿ.ಎಸ್.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಆ ಟ್ಯಾಗ್ ಲೈನ್ ಈಗ ನಿಮ್ಮ ತಂದೆಯವರಿಗೆ ಅಂಟಿಕೊಂಡಿದೆ.


ಉಗ್ರವಾದಕ್ಕೆ ನೀಡುವ ನೆರವು ಮಾನವತೆಯ ವಿರುದ್ಧ ಎಸಗುವ ಮಹಾಪರಾಧ - ರಾಜನಾಥ್‌ಸಿಂಗ್, ಕೇಂದ್ರ ಸಚಿವ

ಕೋಮುವಾದಕ್ಕೆ ನೀಡುವ ನೆರವು ಉಗ್ರವಾದಕ್ಕೆ ನೀಡುವ ಇಂಬು.


ಬಸವರಾಜ ಬೊಮ್ಮಾಯಿ ಜನತಾ ಪರಿವಾರದವರಾದುದರಿಂದ ರಾಜ್ಯದಲ್ಲಿ ಈಗ ಜನತಾದಳ ಸರಕಾರ ಇದೆ ಎಂಬ ಭಾವನೆ ನನ್ನದು - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ನಿಮ್ಮಲ್ಲಿ ಇದೇ ಭಾವನೆ ಇತ್ತೇ?


ಅಯೋಧ್ಯೆಗೂ ಕರ್ನಾಟಕಕ್ಕೂ ಅವಿನಾಭಾವ ಸಬಂಧವಿದೆ - ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಪೇಜಾವರ ಮಠ
ಬಾಬಾ ಬುಡಾನ್ ಗಿರಿ ವಿವಾದದ ಕಾರಣದಿಂದ ಇರಬೇಕು.


ಈ ಹಿಂದೆ ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ. ಈಗ ಗಡ್ಡ ತೆಗೆದು ಬಸವಣ್ಣನಾಗಿದ್ದೇನೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಬಸವಣ್ಣ ಪುಢಾರಿಯಾಗಿರಲಿಲ್ಲ. ಅವರಂಥವರಾಗಲು ಪುಢಾರಿಗಿರಿ ಬಿಟ್ಟು ಬಿಡಿ.


ಬಿಜೆಪಿಗೆ ಯಡಿಯೂರಪ್ಪ ನೀಡಿದ ಚಾರಿತ್ರಿಕ ಕೊಡುಗೆಯನ್ನು ಪದಗಳ ಮೂಲಕ ವರ್ಣಿಸಲು ಸಾಧ್ಯವೇ ಇಲ್ಲ - ನರೇಂದ್ರ ಮೋದಿ, ಪ್ರಧಾನಿ

ಆದ್ದರಿಂದ ಪದಚ್ಯುತಿಯ ಮೂಲಕ ವರ್ಣಿಸಿದಿರಾ?


ನನ್ನನ್ನು ಡಿಸಿಎಂ ಮಾಡಬೇಕೆಂದು ಕುರುಬ ಸಮುದಾಯ ಸೇರಿದಂತೆ ವಿವಿಧ ಸ್ವಾಮೀಜಿಗಳು ಒತ್ತಾಯಿಸಿದ್ದಾರೆ - ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ನೀವು ಕೆಲವು ದಿನ ಬಾಯಿ ಮುಚ್ಚಿ ಸುಮ್ಮನಿರಬೇಕೆಂದು ನಾಡಿಗೆ ನಾಡೇ ಆಗ್ರಹಿಸುತ್ತಿದೆ.


ಬಿಜೆಪಿ ಆಡಳಿತ ಕೊನೆಗಾಣಿಸಲು ವಿಪಕ್ಷಗಳು ಒಂದಾಗಲೇಬೇಕು - ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ಕೊನೆಗಾಲದಲ್ಲಿ ಜ್ಞಾನೋದಯವಾಯಿತೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...