×
Ad

ಕೋವಿಡ್ 3ನೇ ಅಲೆ ತಡೆಗೆ ಕ್ರಮ ಕೈಗೊಳ್ಳುವ ಬದಲು ಸಿಎಂ ಪದೇಪದೆ ದಿಲ್ಲಿಗೆ ಓಡಾಟ: ಸಿದ್ದರಾಮಯ್ಯ ಟೀಕೆ

Update: 2021-08-02 11:32 IST

ಕಾರವಾರ, ಆ.2: ಕೋವಿಡ್ ನಿಂದ ಈಗಾಗಲೇ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸೂಕ್ತ ಆಸ್ಪತ್ರೆ, ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್ ಇಲ್ಲದೆ ಸಾವಿರಾರು ಜನರು ಸಾವಿಗೀಡಾಗಿದ್ದಾರೆ, ಇದು ಮತ್ತೆ ಮರುಕಳಿಸದಂತೆ ತಡೆಯಬೇಕು. ಇದನ್ನು ಬಿಟ್ಟು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲ ರಚನೆಗೆ ಓಡಾಡುತ್ತಿದ್ದಾರೆ. ಒಮ್ಮೆ ದಿಲ್ಲಿಗೆ ಹೋಗಲಿ, ಪದೇ ಪದೇ ಹೋಗುವ ಅಗತ್ಯವೇನಿದೆ? ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾರವಾರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನ ಮೂರನೆ ಅಲೆ ನಮ್ಮ ರಾಜ್ಯಕ್ಕೆ ಬರದಂತೆ ತಡೆಯುವುದು ರಾಜ್ಯ ಸರ್ಕಾರದ ಪ್ರಾಥಮಿಕ ಕೆಲಸವಾಗಬೇಕು. ಅಕ್ಕಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮೂರನೆ ಅಲೆ ಈಗಾಗಲೇ ಬಂದಿದ್ದು ಸೋಂಕು ಪ್ರಮಾಣ ಹೆಚ್ಚಾಗಿದೆ. ಈ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವವರ ಪ್ರಮಾಣ ಹೆಚ್ಚಾಗಿರುತ್ತದೆ ಹಾಗಾಗಿ ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇರಳದಿಂದ ರಾಜ್ಯದ ಕರಾವಳಿ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಹೆಚ್ಚು ಜನ ಬರುತ್ತಾರೆ, ರಾಜ್ಯದ ಗಡಿಗಳಲ್ಲಿ ಅವರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ, ಎರಡು ಡೋಸ್ ಲಸಿಕೆ ಪಡೆಯದವರನ್ನು ಗಡಿ ಒಳಗೆ ಬಿಡಬಾರದು ಹಾಗೂ ಪರೀಕ್ಷೆ ನಡೆಸಿ ನೆಗೆಟಿವ್ ಬಂದವರನ್ನು ಮಾತ್ರ ಒಳಗೆ ಬಿಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ, ಮಂತ್ರಿ ಪದವಿಗಾಗಿ ಲಾಬಿ ಮಾಡುತ್ತಿದ್ದಾರೆ. ಒಬ್ಬ ಶಾಸಕನು ತನ್ನ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡುತ್ತಿಲ್ಲ. ಇವರಿಗೆ ಜನರ ಜೀವಕ್ಕಿಂತ ಮಂತ್ರಿಯಾಗುವುದು ಮುಖ್ಯವಾಗಿದೆ.

ಬಸವರಾಜ ಬೊಮ್ಮಾಯಿ ಈಗಷ್ಟೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದಿಲ್ಲ.‌ ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News