ಸಚಿವ ಸಂಪುಟ ವಿಸ್ತರಣೆ: ರಾಜ್ಯದ ಜನರ ಪಾಲಿಗೆ ಇದು ಪ್ರಾಣ ಸಂಕಟವಾಗಿದೆ; ದಿನೇಶ್ ಗುಂಡೂರಾವ್

Update: 2021-08-02 12:20 GMT

ಬೆಂಗಳೂರು, ಆ. 2: `ಬಿಜೆಪಿ ಹೈಕಮಾಂಡ್‍ಗೆ ರಾಜ್ಯದ ಜನರ ಬಗ್ಗೆ ಕೊಂಚವಾದರೂ ಕನಿಕರವಿದ್ದರೆ, ಈ ಸಚಿವ ಸಂಪುಟ ರಚನೆ ಎಂಬ ಸರ್ಕಸ್‍ನ್ನು ಬೇಗ ಮುಗಿಸಲಿ. ಸಂಪುಟ ರಚನೆ ಎಂಬುದು ಬಿಜೆಪಿ ಹೈಕಮಾಂಡ್ ಪಾಲಿಗೆ ಚೆಲ್ಲಾಟವಾಗಿರಬಹುದು. ಆದರೆ, ರಾಜ್ಯದ ಜನರ ಪಾಲಿಗೆ ಇದು ಪ್ರಾಣ ಸಂಕಟವಾಗಿದೆ. ರಾಜ್ಯದ ಜನರಿಗೆ ಈ ನೂತನ ಸರಕಾರ ಇದ್ದೂ ಸತ್ತಂತೆ ಭಾಸವಾಗುತ್ತಿದೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಗಿರಿಗಾಗಿ ಲಾಬಿ ಮಾಡುತ್ತಿರುವ ಬಿಜೆಪಿ ಶಾಸಕರು, ತಮ್ಮ ಕ್ಷೇತ್ರದ ಕಡೆ ತಲೆ ಹಾಕಿ ಮಲಗಿಲ್ಲ. ಮಂತ್ರಿ ಪದವಿ ಪಡೆಯಲು ಶಾಸಕರು ದಿಲ್ಲಿಯಲ್ಲಿ ತಳವೂರಿದ್ದರೆ, ಇನ್ನು ಕೆಲವರು ಬೆಂಗಳೂರಲ್ಲಿ ಗಿರಕಿ ಹೊಡೆಯುತ್ತಿದ್ದಾರೆ. ಈ ಶಾಸಕರಿಗೆ ತಾವು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಿಂತ, ಮಂತ್ರಿ ಪದವಿಯೇ ಮುಖ್ಯವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಬಿಜೆಪಿಗೆ ರಾಜ್ಯದಲ್ಲಿ ಏಕವ್ಯಕ್ತಿ ಸರಕಾರ ನಡೆಸುವ ಇರಾದೆಯಿದ್ದರೆ ಅದನ್ನು ಸ್ಪಷ್ಟಪಡಿಸಲಿ. ಬಿಜೆಪಿ ಹೈಕಮಾಂಡ್‍ನ ಹುಚ್ಚಾಟ ಅತಿರೇಕಕ್ಕೆ ಹೋಗಿದೆ. ರಾಜ್ಯದಲ್ಲಿ ಕೊರೋನ ಮೂರನೆ ಅಲೆಯ ಆತಂಕ ಮತ್ತು ನೆರೆ ಪರಿಸ್ಥಿತಿಯಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದ ಅಒ, ಕೆಲಸ ಕಾರ್ಯ ಬಿಟ್ಟು ಪದೇ ಪದೇ ಹೊಸದಿಲ್ಲಿಗೆ ಹೋಗುವುದು ಎಷ್ಟು ಸರಿ?' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

`ಬಿಜೆಪಿ ಸರಕಾರದಲ್ಲಿ ಮಂತ್ರಿ ಮಂಡಲ ರಚನೆ ಗಜಪ್ರಸವದಂತಾಗಿದೆ. 2019ರಲ್ಲಿ ಬಿಎಸ್‍ವೈ ಸರಕಾರ ರಚನೆಯಾದಾಗಲೂ 2 ತಿಂಗಳ ಬಳಿಕ ಸಂಪುಟ ರಚನೆಯಾಗಿತ್ತು. ಈಗ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲೂ ಸಂಪುಟ ರಚನೆಯ ಗೊಂದಲ ಇನ್ನೂ ಮುಂದುವರೆದಿದೆ. ಬಿಜೆಪಿ ಹೈಕಮಾಂಡ್‍ಗೆ ಸಿಎಂ ಬದಲಾಯಿಸುವಾಗ ಇದ್ದ ತರಾತುರಿ ಸಂಪುಟ ರಚನೆಯಲ್ಲೂ ಇರಬೇಕಲ್ಲವೆ?' ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News