ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುವೆ: ಉಮೇಶ್ ಕತ್ತಿ

Update: 2021-08-02 12:24 GMT

ಬೆಳಗಾವಿ, ಆ. 2: `ಉಪಮುಖ್ಯಮಂತ್ರಿ ಆಗಬೇಕೆಂದು ಬಯಸಿಲ್ಲ. ಆದರೆ, ವರಿಷ್ಟರು ನನಗೆ ಡಿಸಿಎಂ ಅವಕಾಶ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಆದರೆ, ನಾನು ಸಚಿವನಾಗುವುದು ನಿಶ್ಚಿತ' ಎಂದು ಮಾಜಿ ಸಚಿವ ಹಾಗೂ ಹುಕ್ಕೇರಿ ಕ್ಷೇತ್ರದ ಹಿರಿಯ ಶಾಸಕ ಉಮೇಶ್ ಕತ್ತಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ನೂರಕ್ಕೆ ನೂರರಷ್ಟು ನಾನು ಸಚಿವನಾಗುತ್ತೇನೆಂಬ ವಿಶ್ವಾಸವಿದೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಮನೆಯಲ್ಲಿ ಅಣ್ಣ-ತಮ್ಮಂದಿರು ಜಗಳವಾಡುವುದು ಸ್ವಾಭಾವಿಕ. ಪೂರ್ಣ ಪ್ರಮಾಣದಲ್ಲಿ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ' ಎಂದು ತಿಳಿಸಿದರು.

`ಬೊಮ್ಮಾಯಿ ಅವರು ಮುಂದಿನ ದಿನಗಳಲ್ಲಿ ಒಳ್ಳೆಯ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಡುಗೆ ಕೊಡುತ್ತಾರೆ. ಮುಂದೆ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ದಿಲ್ಲಿಗೆ ಹೋಗಿ ಪಕ್ಷದ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಆಗುವುದು ನನ್ನ ಕರ್ತವ್ಯ. ಹೀಗಾಗಿ ನಡ್ಡಾ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುವೆ. ಇಲ್ಲವಾದರೆ ಶಾಸಕನಾಗಿ ಮುಂದುವರಿಯುತ್ತೇನೆ' ಎಂದರು.

`ನಾನು ಮೂರು ದಿನಗಳಿಂದ ಕ್ಷೇತ್ರದಲ್ಲಿದ್ದು ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದ್ದೇನೆ. ರೈತರು, ಸಂತ್ರಸ್ತರು ತೊಂದರೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆದಿದ್ದೇನೆ. ಪ್ರವಾಹ ಕುರಿತು ಚರ್ಚೆ ನಡೆಸಿ ಸಂತ್ರಸ್ಥರಿಗೆ ಸಹಾಯ ಮಾಡುವ ಕೆಲಸ ಸರಕಾರ ಮಾಡುತ್ತದೆ. ಮುಖ್ಯಮಂತ್ರಿ ದಿಲ್ಲಿಯಿಂದ ಹಿಂದಿರುಗಿದ ಕೂಡಲೇ ಪರಿಹಾರ ಘೋಷಣೆ ಮಾಡಲಿದ್ದು, ರಾಜ್ಯದ 224 ಮಂದಿ ಶಾಸಕರು ಆಸ್ಥೆ ವಹಿಸಿ ಕೆಲಸ ಮಾಡುತ್ತಿದ್ದಾರೆ' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News