ಸಚಿವ ಸ್ಥಾನಾಕಾಂಕ್ಷಿಗಳು ಬಿಎಸ್‍ವೈ ನಿವಾಸಕ್ಕೆ ದೌಡು

Update: 2021-08-02 12:32 GMT

ಬೆಂಗಳೂರು, ಆ. 2: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿ ಶಾಸಕರು ದಿಲ್ಲಿಯಲ್ಲಿ ವರಿಷ್ಟರ ಮಟ್ಟದಲ್ಲಿ ಲಾಬಿ ಆರಂಭಿಸಿದ್ದರೆ, ಮತ್ತೊಂದೆಡೆ ಕೆಲ ಶಾಸಕರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಎಡತಾಕುತ್ತಿದ್ದಾರೆ.

ಸಂಪುಟ ರಚನೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ದಿಲ್ಲಿಯಲ್ಲಿ ವರಿಷ್ಟರ ಭೇಟಿಗೆ ತೆರಳಿದ್ದರೆ, ಇತ್ತ ಯಡಿಯೂರಪ್ಪ ನಿವಾಸ ಕಾವೇರಿಯಲ್ಲಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಪ್ರೀತಂ ಗೌಡ, ಮಸಾಲೆ ಜಯರಾಂ, ಎಂ.ಪಿ.ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್, ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಲವು ಶಾಸಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ಶಾಸಕರಿಗೆ ಯಡಿಯೂರಪ್ಪ ಅವರು ಯಾವುದೇ ಭರವಸೆ ನೀಡದೆ ವರಿಷ್ಟರ ನಿರ್ಧಾರವೇ ಅಂತಿಮ, ನೋಡೋಣ ಎಂದಷ್ಟೇ ಹೇಳಿ ಕಳುಹಿಸಿದ್ದಾರೆ. ಈ ಮಧ್ಯೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಲ ಸ್ವಾಮೀಜಿಗಳು, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಶಾಸಕ ನೆಹರೂ ಓಲೆಕಾರ್ ಬೆಂಬಲಿಗರು ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಈ ಮಧ್ಯೆ ಚಿತ್ರದುರ್ಗ ಜಿಲ್ಲೆಯ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹೊಳಲ್ಕೆರೆ ಕ್ಷೇತ್ರ ಎಂ.ಚಂದ್ರಪ್ಪ, ಹಿರಿಯೂರು ಕ್ಷೇತ್ರದಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಅವರು ಜಾತಿ, ಹಿರಿತನ ಹಾಗೂ ಪಕ್ಷ ಸಂಘಟನೆ ನೆಪದಲ್ಲಿ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ತಮ್ಮದೆ ಆದ ರೀತಿಯಲ್ಲಿ ಒತ್ತಡ ಹೇರುತ್ತಿದ್ದಾರೆ. ಆದರೆ, ಯಾರಿಗೆ ಸ್ಥಾನ ದಕ್ಕಲಿದೆ ಎಂಬುದನ್ನು ಕಾದುನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News