ಯಡಿಯೂರಪ್ಪನವರು ಸೂಕ್ತ ಸ್ಥಾನಮಾನದ ಭರವಸೆ ನೀಡಿದ್ದಾರೆ: ಬಿ.ಸಿ.ಪಾಟೀಲ್

Update: 2021-08-02 12:52 GMT

ಹಾವೇರಿ, ಆ. 2: `ಮಾಜಿ ಸಿಎಂ ಯಡಿಯೂರಪ್ಪನವರು ಸೂಕ್ತ ಸ್ಥಾನಮಾನ ಕಲ್ಪಿಸಿ ಕೊಡುವ ಭರವಸೆ ನೀಡಿದ್ದಾರೆ. ಪಕ್ಷ ಇದುವರೆಗೆ ನನ್ನನ್ನು ಚೆನ್ನಾಗಿ ನಡೆಸಿಕೊಂಡು ಬಂದಿದೆ. ಈಗಲೂ ಚೆನ್ನಾಗಿ ನಡೆಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ' ಎಂದು ಮಾಜಿ ಸಚಿವ ಹಾಗೂ ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಹಿರಿಯರ ಬಗ್ಗೆ ಮಾತನಾಡುವುದಿಲ್ಲ. ಕೆಲವರಿಗೆ ಕೆಲವು ಕಡೆ ಅಸಮಾಧಾನ ಸಹಜ. ಹಿರಿಯರು ಅದನ್ನು ಸರಿಪಡಿಸಿಕೊಳ್ಳುತ್ತಾರೆ. ಏನು ಬರುತ್ತೆ, ಬಂದಾಗ ನೋಡೋಣ' ಎಂದು ಹೇಳಿದರು.

`ಮನುಷ್ಯ ಆಶಾದಾಯಕ ಆಗಿರಬೇಕು. ಊಹೆ ಮೇಲೆ ಮಾತಾಡುವುದು ಬೇಡ. ಸರಕಾರ ಬಂದು ಈಗಾಗಲೇ ಒಂದು ವಾರ ಆಗಿದೆ. ಕೋವಿಡ್ ಮತ್ತು ನೆರೆ ಇರುವ ಸಂದರ್ಭದಲ್ಲಿ ಕೂಡಲೇ ಮಂತ್ರಿ ಮಂಡಲ ರಚನೆ ಮಾಡಬೇಕೆಂದು ಎಲ್ಲರ ಒತ್ತಾಯವಿದೆ. ರಾಜ್ಯದ ಭವಿಷ್ಯ ನುಡಿಯಬೇಕಾದವರು ಪ್ರಜೆಗಳೇ ಹೊರತು ಸ್ವಾಮಿಗಳು, ಧರ್ಮದರ್ಶಿಗಳಲ್ಲ. ನನಗೆ ದೊಡ್ಡ ಗುರುಗಳು ರಾಜಕೀಯಕ್ಕೆ ಬರಬೇಡಿ ಎಂದಿದ್ದರು. ಕೊರೊನ ಬಗ್ಗೆ ಭವಿಷ್ಯ ಹೇಳಲಿ' ಎಂದು ಪಾಟೀಲ್ ಲೇವಡಿ ಮಾಡಿದರು. 

`ಮಾಜಿ ಪ್ರಧಾನಿ ದೇವೇಗೌಡ ಅವರು ವಯಸ್ಸಿನಲ್ಲಿ ಹಿರಿಯರು, ಅನುಭವಿಗಳು. ಹಿರಿಯರು ಎನ್ನುವ ಕಾರಣ ಗೌರವದಿಂದ ಹೋಗಿ ಭೇಟಿಯಾಗಿದ್ದಾರೆ. ನಾನಿನ್ನೂ ಯಾವುದೇ ನಿರೀಕ್ಷೆ ಮಾಡಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಇದೆ. ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ನಮ್ಮ ಜಿಲ್ಲೆಯವರು ಸಿಎಂ ಆಗಿರುವುದರ ಬಗ್ಗೆ ಬಹಳ ಹೆಮ್ಮೆ ಇದೆ. ಹಾವೇರಿ ಮಾತ್ರವಲ್ಲ ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ' ಎಂದು ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News