×
Ad

ಟೋಕಿಯೊ ಒಲಿಂಪಿಕ್ಸ್: ಸೆಮಿಫೈನಲ್‍ಗೆ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡಕ್ಕೆ ರಾಜ್ಯಪಾಲ ಅಭಿನಂದನೆ

Update: 2021-08-02 20:47 IST

ಬೆಂಗಳೂರು, ಆ.2: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ಮಹಿಳೆಯರ ಹಾಕಿ ತಂಡವನ್ನು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಅಂತರ ಗೋಲುಗಳಿಂದ ಮಣಿಸಿ ಭಾರತ ಮಹಿಳೆಯರ ಹಾಕಿ ತಂಡ ಸೆಮಿಫೈನಲ್ ಗೆ ಪ್ರವೇಶಿಸಿದೆ. ಭಾರತ ಮಹಿಳೆಯರ ಹಾಕಿ ತಂಡದ ಈ ಅಭೂತಪೂರ್ವ ಸಾಧನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿನಂದನೆ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಒಲಿಂಪಿಕ್ಸ್‍ನಲ್ಲಿ ಮೊಟ್ಟ ಮೊದಲ ಬಾರಿಗೆ ಸೆಮಿಫೈನಲ್ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ಮಹಿಳಾ ಹಾಕಿ ತಂಡದ ಎಲ್ಲ ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ ನಾನು ಹೃತ್ಪೂರ್ವಕವಾಗಿ ಅಭಿನಂದಿಸುವೆ. ಟೋಕಿಯೋ ಒಲಿಂಪಿಕ್ಸ್ ಭಾರತೀಯರಿಗೆ ನಿಜಕ್ಕೂ ಸ್ಮರಣೀಯ ಎಂದು ಟ್ವೀಟಿಸಿದ್ದಾರೆ.

ಇನ್ನು ನಿನ್ನೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧ 3-1 ಗೋಲುಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಈ ವೇಳೆ ಟ್ವೀಟ್ ಮಾಡಿ ಅಭಿನಂದಿಸಿದ್ದ ರಾಜ್ಯಪಾಲರು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಕ್ವಾರ್ಟರ್ಫೈನಲ್‍ನಲ್ಲಿ ಗೆಲುವು ಸಾಧಿಸಿ, ಸೆಮಿಫೈನಲ್‍ಗೆ ಲಗ್ಗೆ ಇಟ್ಟ ಭಾರತ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆಗಳು. ಭಾರತ ತಂಡವು ಅಂತಿಮ ಪಂದ್ಯದಲ್ಲಿ ಗೆದ್ದು, ಕ್ರೀಡಾ ಲೋಕದಲ್ಲಿ ಭಾರತದ ಕೀರ್ತಿ ಪತಾಕೆ ಎತ್ತಿ ಹಿಡಿಯಲಿ ಎಂದು ಎಲ್ಲಾ ಭಾರತೀಯರ ಪರವಾಗಿ ಆಶಿಸುತ್ತೇನೆ ಎಂದು ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News