ಸಂಪುಟ ರಚನೆ: ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಒಮ್ಮತದ ತೀರ್ಮಾನ; ಮುಖ್ಯಮಂತ್ರಿ ಬೊಮ್ಮಾಯಿ

Update: 2021-08-02 15:45 GMT

ಹೊಸದಿಲ್ಲಿ, ಆ.2: ರಾಜ್ಯ ಸಚಿವ ಸಂಪುಟ ರಚನೆ ಕುರಿತು ಈಗಿರುವ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಒಮ್ಮತದ ತೀರ್ಮಾನ ಆಗಬೇಕು ಎಂಬುದು ನಮ್ಮೆಲ್ಲರ ಪ್ರಯತ್ನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಪ್ರಮುಖರು, ರಾಷ್ಟ್ರೀಯ ಅಧ್ಯಕ್ಷರ ಜೊತೆ ಸಭೆ ನಡೆಸಿ ಸಚಿವ ಸಂಪುಟ ರಚನೆ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಕೆಲವು ಮಾಜಿ ಸಚಿವರು, ಶಾಸಕರು ಇಲ್ಲಿ ಬಂದಿದ್ದಾರೆ. ಅವರ ಜೊತೆಯೂ ಮಾತುಕತೆ ನಡೆಸಲಾಗುವುದು ಎಂದರು.

ಎಲ್ಲ ಶಾಸಕರಿಗೂ ಗೊತ್ತಿದೆ, ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ. ಪ್ರಾದೇಶಿಕವಾರು ಪ್ರಾತಿನಿಧ್ಯ ಹಾಗೂ ಹಿಂದೆ ಇದ್ದಂತಹ ಸಚಿವ ಸಂಪುಟವನ್ನು ಗಮನದಲ್ಲಿಟ್ಟುಕೊಂಡು ಸಮತೋಲನ ಮಾಡಿಕೊಂಡು ಸಚಿವ ಸಂಪುಟ ರಚನೆ ಮಾಡಲಾಗುವುದು. ಇದಕ್ಕಾಗಿ ಒಂದು ಪ್ರಮುಖ ಸೂತ್ರವನ್ನು ಇಟ್ಟುಕೊಂಡು ಇಂದಿನ ಸಭೆಯಲ್ಲಿ ಅಂತಿಮ ಸ್ವರೂಪ ನೀಡಲಾಗುವುದು. ಎಷ್ಟು ಹಂತದಲ್ಲಿ ಸಚಿವ ಸಂಪುಟ ರಚನೆ ಮಾಡಬೇಕು, ಎಷ್ಟು ಮಂದಿ ಸಂಪುಟದಲ್ಲಿ ಇರಬೇಕು, ಪ್ರಾದೇಶಿಕತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಇವತ್ತು ರಾತ್ರಿಯೇ ಸಚಿವ ಸಂಪುಟದ ಕುರಿತು ಅಂತಿಮ ನಿರ್ಣಯವಾದರೆ, ಬುಧವಾರ ಇಲ್ಲ ಗುರುವಾರ ಅಂತಿಮವಾದರೆ ಗುರುವಾರ ಸಚಿವ ಸಂಪುಟ ರಚನೆ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಸಂಪುಟದಲ್ಲಿ ಇರುತ್ತಾರೋ ಇಲ್ಲವೋ ಎಂಬುದರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಇದಕ್ಕೆಲ್ಲ ಹೈಕಮಾಂಡ್ ನಿಗದಿಪಡಿಸಿ ಬಿಡುಗಡೆ ಮಾಡುವ ಸಚಿವರ ಪಟ್ಟಿಯಲ್ಲಿ ಉತ್ತರ ಸಿಗುತ್ತದೆ ಎಂದರು.

ಹೊಸದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಸಭೆಗೂ ಮುನ್ನ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News