ವ್ಯಾಕ್ಸಿನ್ ಹಾಹಾಕಾರಕ್ಕೆ ಕೊನೆ ಎಂದು ಮೋದಿ ಅವರೇ?: ಕಾಂಗ್ರೆಸ್ ಪ್ರಶ್ನೆ

Update: 2021-08-02 16:31 GMT

ಬೆಂಗಳೂರು, ಆ. 2: `ಕೋವಿಡ್ ವ್ಯಾಕ್ಸಿನ್ ಹಾಹಾಕಾರಕ್ಕೆ ಕೊನೆ ಎಂದು ನರೇಂದ್ರ ಮೋದಿ ಅವರೇ? ಕೊರೋನ 3ನೆ ಅಲೆಯ ಭೀತಿ ಇದ್ದರೂ ಲಸಿಕೆ ಅಭಿಯಾನಕ್ಕೆ ವೇಗ ನೀಡುವ ಬದಲಿಗೆ ಕುಂಠಿತಗೊಳಿಸಿದ್ದೇಕೆ? ಇಷ್ಟು ದಿನ ಕಳೆದರೂ ಲಸಿಕೆ ಉತ್ಪಾದನೆ ಹೆಚ್ಚಿಸಿ, ಸಮರ್ಪಕ ಹಂಚಿಕೆ ಮಾಡಲಾಗದೆ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳು' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಬಿಜೆಪಿಯ ಬಣಗಳಾದ ಜನತಾಪರಿವಾರ ವಿರುದ್ಧ ಸಂಘಪರಿವಾರ ಬಣಗಳ ಗುದ್ದಾಟ ಜೋರಾಗಿದೆ! ಜನತಾ ಪರಿವಾರದವರಾದ ಸಿಎಂ ಬಸವರಾಜ ಬೊಮ್ಮಾಯಿ, ಸೋತರೂ ಡಿಸಿಎಂ ಆದ ಲಕ್ಷ್ಮಣ ಸವದಿ, ಮತ್ತೊಬ್ಬ ಡಿಸಿಎಂ ಗೋವಿಂದ್ ಕಾರಜೋಳ, ವಲಸಿಗರಿಗೆ ಉನ್ನತ ಹುದ್ದೆ ಸಿಗುತ್ತಿರುವುದು ಸಂಘಪರಿವಾರದವರ ಕಣ್ಣು ಕೆಂಪಾಗಿದೆ. ವಲಸಿಗರಿಗೆ ಕಪ್ಪು, ಮೂಲದವರಿಗೆ ಚಿಪ್ಪು ಎಂಬಂತಾಗಿದೆ!' ಎಂದು ಟೀಕಿಸಿದೆ.

`ಬಿಜೆಪಿ ಸರಕಾರದ ಅಧಿಕಾರಾವಧಿಯಲ್ಲಿ ದಲಿತರ ಶೋಷಣೆ, ದೌರ್ಜನ್ಯ ಹೆಚ್ಚಿದ್ದು, ರಕ್ಷಣೆ ಇಲ್ಲದಾಗಿದೆ. ರಾಜ್ಯದಲ್ಲಿ ವ್ಯವಸ್ಥಿತವಾಗಿ ದಲಿತ ವಿರೋಧಿ ವಾತಾವರಣ ಸೃಷ್ಟಿ ಮಾಡಿದೆ. ಇದು ಬಸವರಾಜ ಬೊಮ್ಮಾಯಿ ಅವರು ವಿಫಲ ಗೃಹ ಖಾತೆ ನಿರ್ವಹಣೆಗೆ ಹಾಗೂ ಬಿ.ಶ್ರೀರಾಮುಲು ಅವರ ಅಸಾಮಥ್ರ್ಯಕ್ಕೆ ಸಾಕ್ಷಿ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

`ವಂಚನೆ ಆರೋಪಿ ಯುವರಾಜಸ್ವಾಮಿಯಿಂದ ಶ್ರೀರಾಮುಲು ಅವರ ಖಾತೆಗೆ 18 ಲಕ್ಷ ರೂಪಾಯಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಅವ್ಯವಹಾರ ಶ್ರೀರಾಮುಲುರವರ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರಕ್ಕೆ ತಳುಕು ಹಾಕಿಕೊಂಡಿದೆ. ವಂಚಕನೊಂದಿಗೆ ಅವ್ಯವಹಾರದಲ್ಲಿ ಬಾಗಿಯಾಗಿದ್ದವರನ್ನ ಡಿಸಿಎಂ ಮಾಡಲು ಹೊರಟಿದ್ದು ಬಿಜೆಪಿ ಭ್ರಷ್ಟತನಕ್ಕೆ ಸಾಕ್ಷಿ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News