ರಾಮನಗರ: ಕೋವಿಡ್ 3ನೇ ಅಲೆ ನಿಯಂತ್ರಿಸಲು ಸಜ್ಜಾಗಿ: ಡಾ. ರಾಕೇಶ್ ಕುಮಾರ್ ಕೆ.

Update: 2021-08-02 16:37 GMT

ರಾಮನಗರ, ಆ.2: ರಾಮನಗರ ಜಿಲ್ಲೆಯಲ್ಲಿ ಕೋವಿಡ್-19ರ 2ನೇ ಅಲೆಯ ನಿಯಂತ್ರಣ ಕ್ರಮಗಳನ್ನು ನಿಲ್ಲಿಸದೆ ಮುಂದುವರೆಸಿ, 3ನೇ ಅಲೆಯನ್ನು ನಿಯಂತ್ರಿಸಲು ಸಜ್ಜಾಗುವಂತೆ ತಾಲೂಕಿನ ಎಲ್ಲ ತಹಶೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ. ಮಾರ್ಗದರ್ಶನ ನೀಡಿದರು.

ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ನಿಯಮಾನುಸಾರದಂತೆ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಸಂಬಂಧಿಸಿದಂತೆ ಕಬ್ಬಾಳು, ಕೆಂಗಲ್ ಮುಂತಾದ ಹೆಚ್ಚು ಭಕ್ತರು ಸೇರುವಂತ ದೇವಸ್ಥಾನಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು 30 ಜನರಂತೆ ವಿಭಾಗಿಸಿ ಒಂದೂಂದು ಬಾರಿ ದರ್ಶನಕ್ಕೆ ಒಳ ಬಿಡುವಂತೆ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ, ಮಾಸ್ಕ್ ಅನ್ನು ಪರಿಶೀಲಿಸುವಂತೆ ತಿಳಿಸಿದರು.

ವಾಣಿಜ್ಯೋದ್ಯಮಕ್ಕೆ ಸಂಭಂದಿಸಿದಂತೆ ಕೋವಿಡ್ ನಿಯಮಗಳನ್ನು ಕಡ್ಡಾಯಗೊಳಿಸಿ ಅದರಲ್ಲು ಮುಖ್ಯವಾಗಿ ಹೋಟೆಲ್‍ಗಳಲ್ಲಿ ಗಮನಿಸಿರುವ ಹಾಗೆ ರಾತ್ರಿ 10 ಗಂಟೆಯಾದರು ಹೋಟೆಲ್ ತೆರೆದಿರುವುದು ಕಂಡುಬರುತ್ತಿದೆ. ಅದನ್ನು ಗಮನಿಸಿ ಡಿವೈಎಸ್ಪಿಗಳು ಕ್ರಮ ಕೈಗೊಳ್ಳುವಂತೆ ರಾಕೇಶ್ ಕುಮಾರ್ ತಿಳಿಸಿದರು.

ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಯಂತೆ ಕೇರಳ, ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳಿ, ತಮಿಳುನಾಡಿನಿಂದ ಬರುವವರನ್ನು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಹಾಗೂ ಐಸೋಲೇಶನ್ ಮಾಡಲು ಪ್ರತಿದಿನ 2 ಗಂಟೆಗಳು ಮೀಸಲಿಡುವಂತೆ ಅವರು ತಿಳಿಸಿದರು.

ಗ್ರಾಮ ಮಟ್ಟದಲ್ಲಿ ಕೋವಿಡ್ ಪಾಸಿಟೀವ್ ಹೆಚ್ಚಾಗುತ್ತಿದ್ದು ಹತ್ತಿರದ ಪಿ.ಎಚ್.ಸಿ.ಗಳಲ್ಲಿ ವ್ಯವಸ್ಥೆ ಮಾಡಿಕೊಂಡು ಬೆಂಗಳೂರಿನಿಂದ ಹಾಗೂ ಹೊರಗಿಂದ ಬಂದವರಿಗೆ ಹಾಗೂ ತುಂಬ ದಿನದಿಂದ ಕೋವಿಡ್ ಲಕ್ಷಣಗಳು ಇದ್ದು ಟೆಸ್ಟ್ ಮಾಡಿಸಿಕೊಳ್ಳದೆ ಇರುವವರಿಗೂ ಕಡ್ಡಾಯವಾಗಿ ಟೆಸ್ಟ್ ಮಾಡಿಸಬೇಕು ಹಾಗೂ ಐಸೋಲೇಶನ್ ಮಾಡುವಂತೆ ರಾಕೇಶ್ ಕುಮಾರ್ ತಿಳಿಸಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ, ಉಪವಿಭಾಗಧಿಕಾರಿ ಮಂಜುನಾಥ್, ತಾಲೂಕಿನ ತಹಶೀಲ್ದಾರ್‍ಗಳು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News