ಹಿರಿಯೂರು ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

Update: 2021-08-02 16:54 GMT

ಬೆಂಗಳೂರು, ಆ.2: ರಾಜ್ಯದಲ್ಲಿ ಪ್ರವರ್ಗ-1ರ ಅಡಿಯಲ್ಲಿ ಬರುವ ಯಾದವ, ಗೊಲ್ಲ ಸಮುದಾಯದ ಏಕೈಕ ಮಹಿಳಾ ಶಾಸಕಿಯಾಗಿರುವ ಕೆ.ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸಚಿವೆ ಹಾಗೂ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕರ್ನಾಟಕ ರಾಜ್ಯ ಪ್ರವರ್ಗ -1 ರ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಹಾಗೂ ಯಾದವ ಸಮಾಜದ ಮುಖಂಡ ಡಿ.ಟಿ.ಶ್ರೀನಿವಾಸ್, ರಾಜ್ಯದ 50 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ನಿರ್ಣಾಯಕ ಪಾತ್ರ ವಹಿಸುವಲ್ಲಿ ಪ್ರವರ್ಗ 1ರ ಜಾತಿಗಳು ಸಮರ್ಥವಾಗಿವೆ ಎಂದರು.

ಈ ಜಾತಿಯ ಅಡಿಯಲ್ಲಿ ಬರುವ ಗೊಲ್ಲ, ಉಪ್ಪಾರ, ಬೆಸ್ತ, ಕೋಳಿ, ದೊಂಬಿದಾಸ ಇತ್ಯಾದಿ ಸೇರಿ ಒಟ್ಟು 356 ಉಪಜಾತಿಗಳಿದ್ದು, ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ರಾಜ್ಯದ ಜನಸಂಖ್ಯೆಯಲ್ಲಿ 6ನೇ ಒಂದು ಭಾಗದಷ್ಟಿರುವ ಈ ಜಾತಿಯ ಆಧಾರದ ಮೇಲೆ 15 ರಿಂದ 20 ಕ್ಷೇತ್ರಗಳು ಗೆಲ್ಲಬಹುದಾಗಿದೆ ಎಂದು ಅವರು ತಿಳಿಸಿದರು.

ಹಿಂದುಳಿದ ವರ್ಗಗಳ ಮಹಿಳಾ ಶಾಸಕಿಯಾಗಿ ಪೂರ್ಣಿಮಾ ಶ್ರೀನಿವಾಸ್ ಈ ಸಂಘಟನೆಯ ನೇತೃತ್ವ ವಹಿಸಿಕೊಂಡು ಪ್ರವರ್ಗ-1 ಜಾತಿಯ ಗೊಲ್ಲ ಸಮಾಜದಿಂದ ಆಡಳಿತ ಪಕ್ಷ ಬಿಜೆಪಿಯಿಂದ ವಿಧಾನಸಭೆಗೆ ಗೆಲುವು ಸಾಧಿಸಿರುವ ಏಕೈಕ ಮಹಿಳಾ ಶಾಸಕಿಯಾಗಿದ್ದಾರೆ. ರಾಜಕೀಯ ಕುಟುಂಬ ಹಿನ್ನೆಲೆಯಲ್ಲಿ ಬಂದಿರುವ ಇವರ ತಂದೆ ದಿವಂಗತ ಎ.ಕೃಷ್ಣಪ್ಪನವರು ಈ ಹಿಂದೆ ಸಮಾಜಕಲ್ಯಾಣ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಅವರು ತಿಳಿಸಿದರು.

ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಪೂರ್ಣಿಮಾ ಶ್ರೀನಿವಾಸ್ ಹಿಂದುಳಿದ ಜಾತಿಗಳ ಸಂಘಟನೆಯನ್ನು ಒಂದೇ ರಥದಲ್ಲಿ ತೆಗೆದುಕೊಂಡು ಹೋಗುವ ನೈಪುಣ್ಯತೆ ಹೊಂದಿದ್ದಾರೆ. ಇತ್ತೀಚಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಹಿಂದುಳಿದ ಜನಾಂಗದವರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿರುವುದು ತುಂಬಾ ಸಂತೋಷದ ವಿಷಯ. ಅದೇ ರೀತಿ ರಾಜ್ಯದಲ್ಲೂ ಹಿಂದುಳಿದ ಜಾತಿಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ. ಹಾಗಾಗಿ ಮಹಿಳಾ ಕೋಟಾದಲ್ಲಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಉಪ್ಪಾರ ಸಮಾಜದ ಕಾರ್ಯಾಧ್ಯಕ್ಷರಾದ ಎಚ್.ವಿ.ಬಂಡಿ, ಲೋಕೇಶಪ್ಪ, ಗೂರ್ಖಾ ಸಮಾಜ ರಾಜ್ಯಾಧ್ಯಕ್ಷ ಜೋಗಮಲ್, ತೇವರ್ ಸಮಾಜದ ರಾಜ್ಯಾಧ್ಯಕ್ಷ ನಾಗರಾಜ, ದೊಂಬಿದಾಸ ಸಮಾಜದ ರಾಜ್ಯಾಧ್ಯಕ್ಷ ರಂಗಪ್ಪ ಮತ್ತು ಹೆಳವ ಸಮಾಜದ ಗೌರವಾಧ್ಯಕ್ಷ ಎಂ.ಎಸ್. ಹೆಳವರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News