ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರು ಪರಿಹಾರಕ್ಕಾಗಿ ತಾಲೂಕು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ

Update: 2021-08-03 05:25 GMT

ಮೈಸೂರು, ಆ.2: ಕೊರೋನ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು 1 ಲಕ್ಷ ರೂ. ಪರಿಹಾರ ಪಡೆಯಲು ತಾಲೂಕು ಕಚೇರಿಯಲ್ಲಿ ಅಗತ್ಯ ಮಾಹಿತಿ ಮತ್ತು ದಾಖಲೆ ಸಮೇತ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿ ತಿಂಗಳು ಕಳೆದರೂ ಜಾರಿಯಾಗದ ಆದೇಶ ಎಂಬ ಆ.2 ರ ‘‘ವಾರ್ತಾಭಾರತಿ’’ ವರದಿಗೆ ತಕ್ಷಣ ಸ್ಪಂಧಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಈ ಮೇಲಿನ ಆದೇಶ ಹೊರಡಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಬಡತನ ರೇಖೆಗಿಂತ ಕೆಳಗಿರುವ ದುಡಿಯುವ ಸದಸ್ಯ ಮೃತಪಟ್ಟ ಕುಟುಂಬದವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಮೂರು ಹಂತಗಳಲ್ಲಿ ಅರ್ಜಿ ಪರಿಶೀಲನೆ ನಡೆಸಲಾಗುತ್ತದೆ.

ರಾಜ್ಯಮಟ್ಟದ ಸಮಿತಿ ನೇರವಾಗಿ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಪರಿಹಾರ ಪಾವತಿಸಲಾಗುತ್ತದೆ ಎಂದು ಡಿಸಿ ವಿವರಿಸಿದ್ದಾರೆ. ಅರ್ಜಿ ಸಲ್ಲಿಸುವವರು ಕೋವಿಡ್-19 ಪಾಸಿಟಿವ್ ರಿಪೋರ್ಟ್, ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಪಡೆದವರು. ಈ ದಾಖಲೆಗಳನ್ನು ಅರ್ಹತೆ ಪಡೆದ ವೈದ್ಯರಿಂದ ದೃಢೀಕರಿಸುವುದು. ಮೃತಪಟ್ಟವರ ಆಧಾರ್ ಕಾರ್ಡ್, ಮರಣ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಪಡಿತರ ಚೀಟಿ, ಅರ್ಜಿದಾರರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ಅರ್ಜಿದಾರರಿಂದ ಸ್ವಯಂ ಘೋಷಣಾ ಪತ್ರ, ಕುಟುಂಬ ಸದಸ್ಯರ ನಿರಪೇಕ್ಷಣಾ ಪತ್ರ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

 ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ವೈದ್ಯಾಧಿಕಾರಿಗಳನ್ನೊಳಗೊಂಡಂತೆ ಸಮಿತಿ ರಚಿಸುವುದು. ಮೃತ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಉದ್ಭವಿಸಬಹುದಾದ ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆ ನಿವಾರಿಸಲು ಸಭೆಯಲ್ಲಿ ಚರ್ಚಿಸಲಾಗುವುದು ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ನಿರ್ದೇಶನಾಲಯ ಜಿಲ್ಲಾಧಿಕಾರಿ ಹಂತದಲ್ಲಿ ಬಿಎಂಎಸ್ ತಂತ್ರಾಂಶದಲ್ಲಿ ಪರಿಹಾರ ನೀಡಲು ಅನುಮೋದಿಸಲಾದ ಕೋರಿಕೆ ಮೇರೆಗೆ ಮಾಹಿತಿ, ದಾಖಲಾತಿ ಪರಿಶೀಲಿಸಿ ಫಲಾನುಭವಿ ಗಳ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಪಾವತಿಗೆ ಕ್ರಮ ವಹಿಸುತ್ತೇವೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಯನ್ನು ತಾಲೂಕು ಕಚೇರಿಯ ಅಧಿಕಾರಿಗಳು ಸ್ವೀಕರಿಸಿ ಅರ್ಜಿದಾರರಿಗೆ ಸ್ವೀಕೃತಿ ನೀಡುವುದು. ಮಾಹಿತಿ, ಎಲ್ಲ ದಾಖಲಾತಿಗಳನ್ನು ಬಿಎಂಎಸ್ ತಂತ್ರಾಂಶದಲ್ಲಿ ನಮೂದಿಸುವುದು. ಪರಿಹಾರವನ್ನು ನಿಫ್ಟ್, ಆರ್‌ಟಿಜಿಎಸ್ ಮೂಲಕ ವಿತರಿಸಲು ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಮಾಹಿತಿಗಳನ್ನು ನಿಖರವಾಗಿ ನಮೂದಿಸಬೇಕು.

-ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News