ಚುನಾಯಿತ ಪ್ರತಿನಿಧಿಯೇ ಅಲ್ಲದ ವಿಜಯೇಂದ್ರರನ್ನು ಸಚಿವರನ್ನಾಗಿಸುವ ಪ್ರಯತ್ನ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

Update: 2021-08-03 10:09 GMT

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ಬಿವೈ ವಿಜಯೇಂದ್ರಗೆ ಸಿಎಂ ಬೊಮ್ಮಾಯಿ ಅವರ ನೂತನ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದ್ದು,  ಬಿಜೆಪಿಗೆ ವಂಶ ರಾಜಕಾರಣ ಬೆಳೆಸುವುದರಲ್ಲಿ ಬಹಳ ಆಸಕ್ತಿ ಎಂದು ಕಾಂಗ್ರೆಸ್‌ ಆರೋಪಿಸಿದೆ. 

ಈ ಕುರಿತು #ಫ್ಯಾಮಿಲಿಜನತಾಪಾರ್ಟಿ ಎಂಬ ಹ್ಯಾಶ್‌ ಟ್ಯಾಗ್‌ ನೊಂದಿಗೆ ಟ್ವಿಟರ್‌ ನಲ್ಲಿ  ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌,  "ರಾಜ್ಯದಲ್ಲಿ ಮೊದಲ ಬಾರಿ ಸಿಎಂ ಪುತ್ರನನ್ನು ಸಿಎಂ ಮಾಡಿದ ಹೆಗ್ಗಳಿಕೆಯೊಂದಿಗೆ ಈಗ ಚುನಾಯಿತ ಪ್ರತಿನಿಧಿಯೇ ಅಲ್ಲದ
ವಿಜಯೇಂದ್ರರನ್ನು ರನ್ನು ಸಚಿವರನ್ನಾಗಿಸಲು ಮುಂದಾಗಿದೆ. ಯಡಿಯೂರಪ್ಪರ ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ?" ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ. 

"ಹಿಂಬಾಗಿಲಲ್ಲಿ ಆಡಳಿತ ನಡೆಸುತ್ತಿದ್ದ 'ಸೂಪರ್ ಸಿಎಂ' ವಿಜಯೇಂದ್ರರನ್ನು  ಮುಂಬಾಗಿಲ ಮೂಲಕ ಕರೆತರಲು #ಫ್ಯಾಮಿಲಿಜನತಾಪಾರ್ಟಿ ಸಜ್ಜಾಗಿದೆ! ಎಂದು ಆರೋಪಿಸಿರುವ ಕಾಂಗ್ರೆಸ್‌, ವರ್ಗಾವಣೆ ದಂಧೆ, ಆಪರೇಷನ್ ಕಮಲ, ವಿಜಯೇಂದ್ರ ಸೇವಾ ತೆರಿಗೆ ಲೂಟಿ, ಭ್ರಷ್ಟಾಚಾರಗಳ ರೂವಾರಿ ಎಂದು ತಮ್ಮದೇ ಪಕ್ಷದವರ ಆರೋಪವಿದ್ದೂ ಸಂಪುಟ ಸೇರುತ್ತಿರುವುದು ಬಿಜೆಪಿಯ ನೈತಿಕ ದಿವಾಳಿತನಕ್ಕೆ ಸಾಕ್ಷಿ" ಎಂದು ಹೇಳಿದೆ. 

"ರಾಜ್ಯದಲ್ಲಿನ ಹಲವು ಸಮಸ್ಯೆಗಳ ಬಗ್ಗೆ ರಾಜ್ಯದ 25 ಸಂಸದರಲ್ಲಿ ಒಬ್ಬರೂ ಸಂಸತ್ತಿನಲ್ಲಿ ಧ್ವನಿ ಎತ್ತದೆ ಬೆಕ್ಕಿಗೆ ಹೆದರಿ ಅಡಗಿದ ಇಲಿಯಂತೆ ಕುಳಿತಿದ್ದಾರೆ! ನೆರೆಯಿಂದ ಅರ್ಧ ಕರ್ನಾಟಕ ಮುಳುಗಿದೆ, ಪರಿಹಾರದ ಬಗ್ಗೆ ಪ್ರಶ್ನೆ ಎತ್ತಲಿಲ್ಲ. ಲಸಿಕೆ ಕೊರತೆ ಇದೆ, ಗಮನ ಸೆಳೆಯಲಿಲ್ಲ, ಜಿಎಸ್‌ ಟಿ ಬಾಕಿ ಇದೆ, ಬೇಡಿಕೆ ಇಡಲಿಲ್ಲ" ಎಂದು ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಆರೋಪಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News